ADVERTISEMENT

ಇರಾನ್‌: ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ

ಏಜೆನ್ಸೀಸ್
Published 13 ಅಕ್ಟೋಬರ್ 2022, 15:45 IST
Last Updated 13 ಅಕ್ಟೋಬರ್ 2022, 15:45 IST
ಯುರೋಪ್‌ನ ಪ್ರಿಸ್ಟಿನಾದಲ್ಲಿ ಹಮ್ಮಿಕೊಳ್ಳಲಾಗಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಮಹಿಳೆಯರು ಇರಾನ್‌ನ ನಾಗರಿಕರ ಹೋರಾಟವನ್ನು  ಬೆಂಬಲಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು–ಎಎಫ್‌ಪಿ ಚಿತ್ರ 
ಯುರೋಪ್‌ನ ಪ್ರಿಸ್ಟಿನಾದಲ್ಲಿ ಹಮ್ಮಿಕೊಳ್ಳಲಾಗಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಮಹಿಳೆಯರು ಇರಾನ್‌ನ ನಾಗರಿಕರ ಹೋರಾಟವನ್ನು  ಬೆಂಬಲಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು–ಎಎಫ್‌ಪಿ ಚಿತ್ರ    

ಪ್ಯಾರಿಸ್‌ (ಎಎಫ್‌ಪಿ): ಮಹಸ ಅಮಿನಿ ಸಾವು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಇರಾನ್‌ನ ಭದ್ರತಾ ಪಡೆಯವರು ಬುಧವಾರ ಗುಂಡಿನ ದಾಳಿ ನಡೆಸಿದ್ದಾರೆ.

ಮಕ್ಕಳು ಸೇರಿದಂತೆ ಈವರೆಗೆ ಒಟ್ಟು 108 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ದೂರಿವೆ.

‘ಟೆಹರಾನ್‌ನ ಬೀದಿಗಳಲ್ಲಿ ಬುರ್ಖಾ ಧರಿಸದೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರು ‘ಸರ್ವಾಧಿಕಾರಿ ಸಾಯಲಿ’ ಎಂಬ ಘೋಷಣೆಗಳನ್ನು ಕೂಗಿದರು. ಇಸ್ಫಹಾನ್‌, ಕರಜ್‌ ಹಾಗೂ ಸಕೀಜ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಗುಂಡಿನ ಸದ್ದು ಕೇಳಿದೊಡನೆ ಘೋಷಣೆ ಮೊಳಗಿಸುವುದನ್ನು ನಿಲ್ಲಿಸಿದರು’ ಎಂದು ನಾರ್ವೆ ಮೂಲದ ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ. ಈ ಕುರಿತ ವಿಡಿಯೊವನ್ನೂ ಬಿಡುಗಡೆ ಮಾಡಿದೆ.

ADVERTISEMENT

‘ಇರಾನ್‌ನ ಶತ್ರು ರಾಷ್ಟ್ರಗಳು ದೇಶದಲ್ಲಿ ನಡೆಯುತ್ತಿರುವ ಗಲಭೆಗೆ ಪ್ರಚೋದನೆ ನೀಡುತ್ತಿವೆ’ ಎಂದು ಇರಾನ್‌ನ ಸರ್ವೋಚ್ಛ ನಾಯಕ ಅಯತ್‌ ಉಲ್ಲಾ ಅಲಿ ಖಾಮೇನಿ ಬುಧವಾರ ದೂರಿದ್ದಾರೆ.

‘ಟೆಹರಾನ್‌ನ ಆಜಾದ್‌ ವಿಶ್ವವಿದ್ಯಾಲಯದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು,‘ಸುಮ್ಮನೆ ನೋಡುತ್ತಾ ಕೂರುವವರು ನಮಗೆ ಬೇಕಿಲ್ಲ. ಬನ್ನಿ ಹೋರಾಟದಲ್ಲಿ ಪಾಲ್ಗೊಳ್ಳಿ’ ಎಂಬ ಹಾಡು ಹಾಡಿದರು. ‘ಮಹಿಳೆ, ಜೀವನ, ಸ್ವಾತಂತ್ರ್ಯ’ ಎಂಬ ಘೋಷಣೆಯನ್ನು ಗೋಡೆಗಳ ಮೇಲೆ ಬರೆಯಲಾಗಿತ್ತು’ ಎಂದು ಎಎಫ್‌ಪಿ ಹೇಳಿದೆ.

‘ದೇಶದಲ್ಲಿ ಬಿಗುವಿನ ವಾತಾವರಣವಿದೆ. ಈ ಬಾರಿ ಮಹತ್ತರವಾದ ಬದಲಾವಣೆಯೊಂದು ನಡೆಯುತ್ತದೆ ಎಂಬ ಭರವಸೆ ಜನರಲ್ಲಿದೆ. ಇಂತಹ ಸಮಯದಲ್ಲಿ ನಾಗರಿಕರು ಪ್ರತಿಭಟನೆ ಕೈಬಿಡುವ ಸಾಧ್ಯತೆಯೇ ಇಲ್ಲ’ ಎಂದು ವ್ಯಕ್ತಿಯೊಬ್ಬರು ಬಿಬಿಸಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.