ADVERTISEMENT

H–1ಬಿ ವೀಸಾ ಶುಲ್ಕ ಹೆಚ್ಚಳ: ವಾಸ್ತವ್ಯ ಅವಧಿ ವಿಸ್ತರಣೆ ಪ್ರಕರಣಗಳಿಗೆ ಅನ್ವಯಿಸದು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 13:33 IST
Last Updated 21 ಅಕ್ಟೋಬರ್ 2025, 13:33 IST
–
   

ನ್ಯೂಯಾರ್ಕ್‌: ಎಚ್‌–1ಬಿ ವೀಸಾಕ್ಕೆ ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಂಬಂಧಿಸಿ ಮಾಡಲಾಗಿರುವ ಶುಲ್ಕ ಹೆಚ್ಚಳವು ‘ಸ್ಥಾನ ಬದಲಾವಣೆ’ ಅಥವಾ ‘ವಾಸ್ತವ್ಯದ ಅವಧಿಯ ವಿಸ್ತರಣೆ’ ಕೋರಿದ ಅರ್ಜಿಗಳಿಗೆ ಅನ್ವಯಿಸುವುದಿಲ್ಲ ಎಂದು ಅಮೆರಿಕ ಹೇಳಿದೆ.

ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ (ಯುಎಸ್‌ಸಿಐಎಸ್‌) ಇಲಾಖೆಯು ಸೋಮವಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳು ಇಂತಹ ಹಲವಾರು ಅಂಶಗಳನ್ನು ಒಳಗೊಂಡಿದೆ.

ಎಚ್‌–1ಬಿ ವೀಸಾಕ್ಕಾಗಿ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸೆಪ್ಟೆಂಬರ್ 19ರಂದು ಆದೇಶ ಹೊರಡಿಸಿದ್ದರು.

ADVERTISEMENT

‘ವೀಸಾ ಅರ್ಜಿ ಶುಲ್ಕ ಹೆಚ್ಚಳ ಕುರಿತ ಆದೇಶವು ಈ ಮೊದಲು ನೀಡಲಾಗಿರುವ ಎಚ್‌–1ಬಿ ವೀಸಾಗಳು ಅಥವಾ ವೀಸಾ ಕೋರಿ ಅಮೆರಿಕ ಕಾಲಮಾನ ಪ್ರಕಾರ ಸೆಪ್ಟೆಂಬರ್ 21ರ ತಡರಾತ್ರಿ 12.01ಕ್ಕೂ ಮೊದಲು ಸಲ್ಲಿಸಿರುವ ಅರ್ಜಿಗಳಿಗೆ ಅನ್ವಯವಾಗುವುದಿಲ್ಲ’ ಎಂದು ಯುಎಸ್‌ಸಿಐಎಸ್‌ ಹೇಳಿದೆ.

ಎಚ್‌–1ಬಿ ವೀಸಾ ಹೊಂದಿರುವವರು ಅಮೆರಿಕಕ್ಕೆ ಬರಲು ಇಲ್ಲವೇ ಅಮೆರಿಕದಿಂದ ಇತರ ದೇಶಗಳಿಗೆ ಸಂಚರಿಸುವುದಕ್ಕೆ ಕೂಡ ಈ ಆದೇಶ ನಿರ್ಬಂಧ ಹೇರುವುದಿಲ್ಲ ಎಂದೂ ತಿಳಿಸಿದೆ.

ಹೊಸ ಶುಲ್ಕ ನೀತಿ ಪ್ರಶ್ನಿಸಿ ಅಮೆರಿಕ ವಾಣಿಜ್ಯ ಮಂಡಳಿ ಅಕ್ಟೋಬರ್‌ 16ರಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ, ಈ ಹೊಸ ಮಾರ್ಗಸೂಚಿಗಳನ್ನು ಯುಎಸ್‌ಸಿಐಎಸ್‌ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.