ADVERTISEMENT

ನಂಬಬೇಕಂತೆ | ‘ಮುಂಬೈ ದಾಳಿಗೂ ನನಗೂ ಸಂಬಂಧವಿಲ್ಲ’ ಕೋರ್ಟ್‌ಗೆ ಉಗ್ರ ಹಫೀಜ್ ಸಯೀದ್

ಏಜೆನ್ಸೀಸ್
Published 13 ಜುಲೈ 2019, 2:26 IST
Last Updated 13 ಜುಲೈ 2019, 2:26 IST
   

ಲಾಹೋರ್:ಮುಂಬೈ ಮೇಲೆ ನವೆಂಬರ್ 2008ರಂದು ನಡೆದ ಉಗ್ರರ ದಾಳಿ ಸೇರಿದಂತೆ ಭಾರತದ ನೆಲದಲ್ಲಿ ನಡೆದ ಯಾವುದೇ ಭಯೋತ್ಪಾದನಾ ಚಟುವಟಿಕೆಯಲ್ಲಿ ನನ್ನ ಪಾತ್ರ ಇಲ್ಲ ಎಂದು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಲಷ್ಕರ್ ಎ ತಯ್ಯಬಾ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ಒದಗಿಸುವ ಪ್ರಮುಖ ಆರೋಪ ಹಫೀದ್ ಸಯೀದ್‌ ಲಾಹೋರ್ ಹೈಕೋರ್ಟ್‌ನಲ್ಲಿ ತನ್ನ ಮೇಲೆ ಹೊರಿಸಿರುವ ಆರೋಪಗಳನ್ನು ತಳ್ಳಿಹಾಕಿದ್ದಾನೆ.

ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವ ಆರೋಪ ಹೊತ್ತಿರುವಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥನೂ ಆಗಿರುವಹಫೀದ್ ಸಯೀದ್ ಶುಕ್ರವಾರ ತನ್ನ ಸಹಚರರೊಂದಿಗೆ ಲಾಹೋರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತನ್ನ ವಿರುದ್ಧ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ದಳ ಸಿದ್ಧಪಡಿಸಿರುವ ಎಫ್‌ಐಆರ್ ವಜಾ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ.

ADVERTISEMENT

ಪಾಕಿಸ್ತಾನದ ಕೇಂದ್ರ ಸರ್ಕಾರ, ಪಂಜಾಬ್ ಸರ್ಕಾರ ಮತ್ತು ಭಯೋತ್ಪಾದನಾ ನಿಗ್ರಹ ದಳಗಳನ್ನು ಪ್ರತಿವಾದಿಗಳು ಎಂದು ಹಫೀಜ್ ಸಯೀದ್ ಹೆಸರಿಸಿದ್ದಾನೆ. ಸಯೋದ್ ಜೊತೆಗೂಡಿಅಮಿರ್ ಹಂಜಾ, ಅಬ್ದುರ್ ರೆಹಮಾನ್ ಮಕ್ಕಿ, ಎಂ.ಯಾಹ್ಯಾ ಖಾನ್ ಅಜೀಜ್ ಸಹ ಲಾಹೋರ್ ಹೈಕೋರ್ಟ್‌ಗೆಅರ್ಜಿ ಸಲ್ಲಿಸಿದ್ದಾರೆ.

ತಮಗೆ ಲಷ್ಕರ್ ಎ ತಯ್ಯಬಾ ಮತ್ತು ಅಲ್ ಖೈದಾ ಮತ್ತು ಅವುಗಳನ್ನು ಹೋಲುವ ಸಂಘಟನೆಗಳ ಜೊತೆಗೆ ಯಾವುದೇ ಸಂಬಂಧವಿಲ್ಲ. ದೇಶ ವಿರೋಧಿ ಚಟುವಟಿಕೆಗಳಲ್ಲಿ ನಾವು ಪಾಲ್ಗೊಂಡಿಲ್ಲ. ಮುಂಬೈ ಉಗ್ರರ ದಾಳಿ ಪ್ರಕರಣದಲ್ಲಿ ಹಫೀಜ್ ಸಯೀದ್ ವಿರುದ್ಧ ಭಾರತ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ.‌ ಅದು ಸತ್ಯಕ್ಕೆ ದೂರವಾದುದು ಎಂಬುದು ಅವರ ವಾದ.

ಈ ತಿಂಗಳ ಆರಂಭದಲ್ಲಿ ಪಂಜಾಬ್ ನ ಭಯೋತ್ಪಾದನಾ ನಿಗ್ರಹ ದಳವು ಹಫೀಜ್ ಸಯೀದ್ ಮತ್ತು ಆತನ ಸಹಚರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿತ್ತು. ಶಂಕಿತ ಉಗ್ರರಿಗೆ ತಮ್ಮ ಟ್ರಸ್ಟ್‌ಗಳ ಮೂಲಕ ಹಣ ಸಂಗ್ರಹಿಸಿ ಕೊಡುತ್ತಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಗಿತ್ತು.

ಜಮಾತ್ ಉಲ್ ದವಾ, ಲಷ್ಕರ್ ಎ ತಯ್ಯಬಾ ಮತ್ತು ಫಲಾಹ್ ಎ ಇನ್ಸಿಯಾತ್ ಸಂಘಟನೆಗಳ ಮೇಲೆ ವಿಶ್ವಸಂಸ್ಥೆಯು ನಿಷೇಧ ಹೇರಿ, ಶಿಸ್ತುಕ್ರಮ ಜರುಗಿಸುವಂತೆ ಪಾಕ್ ಸರ್ಕಾರಕ್ಕೆ ಸೂಚಿಸಿದ ಮೇಲೆಅಲ್ಲಿನ ಸರ್ಕಾರ ತನಿಖೆಗೆ ಮುಂದಾಗಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಜ.1ರಂದು ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯು ಉಗ್ರರ ವಿರುದ್ಧ ಶೀಘ್ರ ಕ್ರಮ ಜರುಗಿಸಲು ಸೂಚಿಸಿತ್ತು.

ಅದರಂತೆ ಭಯೋತ್ಪಾದನಾ ನಿಗ್ರಹ ದಳವು ಲಾಹೋರ್, ಗುಜ್ರನ್ ವಾಲಾ ಮತ್ತು ಮುಲ್ತಾನ್ ಪಟ್ಟಣಗಳಲ್ಲಿ ನಿಷೇಧಿತ ಸಂಘಟನೆಗಳ ನಾಯಕರ ವಿರುದ್ಧ ಪ್ರಕರಣ ದಾಖಲಿಸಿತ್ತು.

ಕಣ್ಣೊರೆಸುವ ತಂತ್ರ: ‘ಉಗ್ರರ ವಿರುದ್ಧ ಪಾಕಿಸ್ತಾನವು ಜರುಗಿಸುತ್ತಿರುವ ಕ್ರಮಗಳು ನಂಬಲು ಅರ್ಹವಾಗಿಲ್ಲ’ ಎಂದು ಭಾರತ ತಳ್ಳಿಹಾಕಿದೆ. ಇದು‘ಕೇವಲ ಕಣ್ಣೊರೆಸುವ ತಂತ್ರ. ಅಂತರರಾಷ್ಟ್ರೀಯ ಸಮುದಾಯವನ್ನು ದಿಕ್ಕು ತಪ್ಪಿಸುವ ಪ್ರಯತ್ನ’ ಎಂದು ಭಾರತ ದೂರಿದೆ.

ಭಯೋತ್ಪಾದಕರ ಹಣಕಾಸು ಮೂಲಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಪಾಕಿಸ್ತಾನ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅದನ್ನು ಬೂದುಪಟ್ಟಿಯಲ್ಲಿ (ಗ್ರೇಲಿಸ್ಟ್‌) ಇರಿಸಲಾಗುವುದು ಎಂದು ಕಳೆದ ವರ್ಷ ವಿಶ್ವಸಂಸ್ಥೆಯ ಹಣಕಾಸು ನಿಯಂತ್ರಣ ಕಾರ್ಯಪಡೆ (Financial Action Task Force FATF) ಹೇಳಿತ್ತು. ಉಗ್ರರ ಹಣಕಾಸು ಮೂಲಗಳ ವಿರುದ್ಧ ಕ್ರಮ ಜರುಗಿಸಲು ಗಡುವು ನಿಗದಿಪಡಿಸಿತ್ತು. ಅದಾದ ನಂತರ ಎಚ್ಚೆತ್ತುಕೊಂಡ ಪಾಕಿಸ್ತಾನವು ಭಯೋತ್ಪಾದಕರ ನಿಧಿ ಸಂಗ್ರಹ ಜಾಲವನ್ನು ನಿಯಂತ್ರಿಸಲು ತರಾತುರಿಯಲ್ಲಿ ಮುಂದಾಗಿತ್ತು. ಇದರ ಮುಂದುವರಿದ ಭಾಗವಾಗಿ ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಪ್ರಕರಣ ದಾಖಲಿಸುವ ಕಣ್ಣೊರೆಸುವ ತಂತ್ರಗಳನ್ನು ಜಗತ್ತಿನ ಎದುರು ತೆರೆದಿಡುತ್ತಿದೆ ಎಂದು ಭಾರತ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.