ADVERTISEMENT

ಹೈಟಿ: ರಾಜಕಾರಣ ಪ್ರವೇಶ– ಸುಳಿವು ನೀಡದ ಪ್ರಥಮ ಮಹಿಳೆ ಮಾರ್ಟಿನ್‌ ಮೊಯಿಸ್‌

ಹಂಗಾಮಿ ಪ್ರಧಾನಿ ಅಧಿಕಾರ ಮೊಟಕು ಸಂಭವ

ಏಜೆನ್ಸೀಸ್
Published 18 ಜುಲೈ 2021, 6:41 IST
Last Updated 18 ಜುಲೈ 2021, 6:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪೋರ್ಟ್‌– ಒ–ಪ್ರಿನ್ಸ್‌ (ಹೈಟಿ): ಹೈಟಿ ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ ಅವರ ಹತ್ಯೆ ನಡೆದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಮಾರ್ಟಿನ್‌ ಮೊಯಿಸ್‌ ಅವರು ಚಿಕಿತ್ಸೆ ಪಡೆದು, ಭಾನುವಾರ ಇಲ್ಲಿಗೆ ಮರಳಿದ್ದಾರೆ.

ಪತಿಯ ಹತ್ಯೆಯ ಆಘಾತದಿಂದ ಅವರು ಇನ್ನೂ ಚೇತರಿಸಿಕೊಳ್ಳಬೇಕಿದೆ. ಅಲ್ಲದೇ, ಸಕ್ರಿಯ ರಾಜಕಾರಣ ಪ್ರವೇಶಿಸುವ ಕುರಿತು ಸಹ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಅವರು ಸುಳಿವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಹೈಟಿಯ ಒಟ್ಟಾರೆ ರಾಜಕೀಯ ಬರುವ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬದು ಅಷ್ಟೇ ಅಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

‘ಅವರು ಹೈಟಿಗೆ ಮರಳಿದ್ದಾರೆ ಎಂದರೆ, ದೇಶವನ್ನು ಮುನ್ನಡೆಸುವ ಕಾರ್ಯದಲ್ಲಿ ತೊಡಗುವ ಮುನ್ಸೂಚನೆ ನೀಡಿದ್ದಾರೆ ಎಂದರ್ಥ’ ಎಂದು ಹೈಟಿ ಕುರಿತ ವಿದ್ಯಮಾನಗಳ ತಜ್ಞೆ ಹಾಗೂ ಡ್ಯೂಕ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಲಾರೆಂಟ್‌ ಡುಬೊಯಿಸ್‌ ಹೇಳಿದರು.

ADVERTISEMENT

ಸದ್ಯ, ಪೊಲೀಸ್‌ ಹಾಗೂ ಮಿಲಿಟರಿ ಬೆಂಬಲ ಹೊಂದಿರುವ ಹಂಗಾಮಿ ಪ್ರಧಾನಿ ಕ್ಲಾಡ್‌ ಜೋಸೆಫ್‌ ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನೊಂದೆಡೆ, ಪರ್ಯಾಯ ನಾಯಕನ ಆಯ್ಕೆ ಪ್ರಕ್ರಿಯೆ ಆರಂಭಿಸಲು ವಿವಿಧ ದೇಶಗಳ ರಾಜತಾಂತ್ರಿಕರು ಹೈಟಿಗೆ ಬಂದಿಳಿದಿದ್ದಾರೆ. ಈ ಸಮಯದಲ್ಲಿಯೇ ಪ್ರಥಮ ಮಹಿಳೆ ಮಾರ್ಟಿನ್‌ ಮೊಯಿಸ್‌ ಮರಳಿರುವುದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ (53) ಅವರನ್ನು ಜುಲೈ 7ರಂದು ಮುಂಜಾನೆ ಅವರ ಮನೆಯಲ್ಲಿಯೇ ಸಶಸ್ತ್ರ ವ್ಯಕ್ತಿಗಳ ಗುಂಪು ಹತ್ಯೆ ಮಾಡಿತ್ತು. ಈ ವೇಳೆ ಮೊಯಿಸ್‌ ಅವರ ಪತ್ನಿ ಗಾಯಗೊಂಡಿದ್ದರು. ಅವರನ್ನು ಮಿಯಾಮಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾನುವಾರ ಖಾಸಗಿ ವಿಮಾನದಲ್ಲಿ ಇಲ್ಲಿಗೆ ಬಂದಿಳಿದ ಅವರು, ಕಪ್ಪು ದಿರಿಸು ಧರಿಸಿದ್ದರು. ಕಪ್ಪು ಬಣ್ಣದ ಗುಂಡು ನಿರೋಧಕ ಜಾಕೆಟ್‌, ಕಪ್ಪು ಬಣ್ಣದ ಮಾಸ್ಕ್ ಜೊತೆಗೆ ಬಲ ತೋಳಿಗೆ ಕಪ್ಪು ಪಟ್ಟಿಯನ್ನೂ ಧರಿಸಿದ್ದರು. ಆ ಮೂಲಕ ಅವರು ಪತಿಯ ಹತ್ಯೆಗೆ ಶೋಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.