ADVERTISEMENT

ಚುನಾವಣೆ ಅಧಿಕಾರಿಗಳ ವಿರುದ್ಧ ದೇಶದ್ರೋಹ ಪ್ರಕರಣಕ್ಕೆ ಇಮ್ರಾನ್‌ ಕರೆ

ಪಿಟಿಐ
Published 17 ಮಾರ್ಚ್ 2024, 21:37 IST
Last Updated 17 ಮಾರ್ಚ್ 2024, 21:37 IST
   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಫೆಬ್ರವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನಾದೇಶವನ್ನು ಕದ್ದ ಆರೋಪದ ಮೇಲೆ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಮೊಕದ್ದಮೆ ಹೂಡುವಂತೆ ಬಂಧಿತ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಒತ್ತಾಯಿಸಿದ್ದಾರೆ.

ಅಲ್‌– ಖಾದಿರ್‌ ಟ್ರಸ್ಟ್‌ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಇಮ್ರಾನ್‌ ಸುದ್ದಿಗಾರರೊಂದಿಗೆ ಮಾತನಾಡಿದರು. ಇಮ್ರಾನ್‌ ಪತ್ನಿ ಬುಶ್ರಾ ಬಿಬಿ, ಆಪ್ತ ಫರಾ ಗೋಗಿ ಮತ್ತು ಉದ್ಯಮಿ ಮಲಿಕ್‌ ರಿಯಾಜ್‌ ಕೂಡ ಈ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.  

ಫೆ.8 ರಂದು ನಡೆದಿದ್ದ ಚುನಾವಣೆಯಲ್ಲಿ ಮತಯಂತ್ರದ ವಿರುದ್ಧ ಆರೋಪಗಳು ಕೇಳಿಬಂದಿವೆ. ಈ ಚುನಾವಣೆಯಲ್ಲಿ ಇಮ್ರಾನ್‌ ಅವರ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷದ 90ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಅದಾಗ್ಯೂ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಅವರ ಪಾಕಿಸ್ತಾನ್‌ ಮುಸ್ಲಿಂ ಲೀಗ್‌– ನವಾಜ್‌ (ಪಿಎಂಎಲ್‌– ಎನ್‌) ಹಾಗೂ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸಮಿಶ್ರ ಸರ್ಕಾರ ರಚಿಸಿವೆ. 

ADVERTISEMENT

‘ದೇಶಾದ್ಯಂತ ನಮ್ಮ ಪಕ್ಷ ಒಟ್ಟು 30 ಮಿಲಿಯನ್‌ (3 ಕೋಟಿ) ಮತಗಳನ್ನು ಪಡೆದುಕೊಂಡಿದ್ದರೆ, ಉಳಿದ 17 ಪಕ್ಷಗಳೆಲ್ಲವೂ ಸೇರಿ ಅಷ್ಟು ಮತಗಳನ್ನು ಪಡದುಕೊಂಡಿವೆ ಎಂದು ಡಾನ್‌ ಸುದ್ದಿ ಪತ್ರಿಕೆ ವರದಿ ಮಾಡಿದೆ. ಚುನಾವಣಾ ಅಕ್ರಮದ ಕುರಿತು ನಮ್ಮ ಪಕ್ಷವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಮ್‌ಎಫ್‌)ಗೆ ತಿಳಿಸಿದೆ. ಅಲ್ಲದೇ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿದೆ ಎಂದು ಸಂಸ್ಥೆಯೂ ಎತ್ತಿ ತೋರಿಸಿದೆ’ ಎಂದು ಇಮ್ರಾನ್‌ ಆರೋಪಿಸಿದರು.

ಈ ನಡುವೆ ಅಮೆರಿಕದಲ್ಲಿರುವ ಐಎಮ್‌ಎಫ್‌ ಪ್ರಧಾನ ಕಚೇರಿ ಎದುರು ಚುನಾವಣಾ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಅಲ್ಲಿ ಕೂಗಲಾದ ಸೇನಾ ವಿರೋಧಿ ಘೋಷಣೆ ಕುರಿತು ಇಮ್ರಾನ್‌ ಪ್ರತಿಕ್ರಿಯೆ ನೀಡಿಲ್ಲ. 

ಅಲ್ಲದೇ ‘ಮೊದಲು ನಮ್ಮ ಪಿಟಿಐ ಪಕ್ಷದ ಚಿಹ್ನೆ ‘ಬ್ಯಾಟ್‌’ ಬಳಸಲು ಅನುಮತಿ ನಿರಾಕರಿಸಲಾಯಿತು ಮತ್ತು ನಮ್ಮ ಪಕ್ಷ ಮೀಸಲು ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಜನರ ಆದೇಶವನ್ನು ಕದ್ದ ಅಧಿಕಾರಿಗಳ ವಿರುದ್ಧ ದೇಶದ್ರೋಹದ ವಿಚಾರಣೆ ನಡೆಸಬೇಕು. ಜನಾದೇಶವನ್ನು ಕದಿಯುವುದು ದೇಶದ್ರೋಹವಾಗಿದೆ ಮತ್ತು ಇದು ಸಂವಿಧಾನದ 6ನೇ ವಿಧಿಯ ಉಲ್ಲಂಘನೆಯಾಗಿದೆ’ ಎಂದು ಇಮ್ರಾನ್‌ ಆಗ್ರಹಿಸಿದರು. 

‘ಮೀಸಲು ಸ್ಥಾನಗಳ ಕುರಿತು ಪೇಶಾವರ ಹೈಕೋರ್ಟ್‌ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಪಾಕಿಸ್ತಾನ ಚುನಾವಣಾ ಆಯೋಗವು ನಮ್ಮ ಪಿಟಿಐ ಪಕ್ಷದ ಸ್ಥಾನಗಳನ್ನು ಬೇರೆ ಪಕ್ಷಗಳಿಗೆ ನೀಡಲು ಸಾಧ್ಯವಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.