ADVERTISEMENT

ಪಾಕ್‌ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಕಿತ್ತೊಗೆಯಲು ನಡೆಯಿತೇ ಕಸರತ್ತು?

ಸೇನಾ ಮುಖ್ಯಸ್ಥರ ಬದಲಾವಣೆ l ಕೊನೆ ಕ್ಷಣದಲ್ಲಿ ಇಮ್ರಾನ್ ಖಾನ್ ವಿಫಲ ಯತ್ನ l ಮಾಧ್ಯಮ ವರದಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 17:35 IST
Last Updated 10 ಏಪ್ರಿಲ್ 2022, 17:35 IST
ಪಾಕಿಸ್ತಾನ ಸಂಸತ್‌ ಭವನದ ಮುಂಭಾಗದಲ್ಲಿ ಇಮ್ರಾನ್‌ ಖಾನ್‌ ಪರವಾಗಿ ಅವರ ಬೆಂಬಲಿಗರು ಭಾನುವಾರ ಘೋಷಣೆಗಳನ್ನು ಕೂಗಿದರು –ಎಪಿ/ಪಿಟಿಐ ಚಿತ್ರ
ಪಾಕಿಸ್ತಾನ ಸಂಸತ್‌ ಭವನದ ಮುಂಭಾಗದಲ್ಲಿ ಇಮ್ರಾನ್‌ ಖಾನ್‌ ಪರವಾಗಿ ಅವರ ಬೆಂಬಲಿಗರು ಭಾನುವಾರ ಘೋಷಣೆಗಳನ್ನು ಕೂಗಿದರು –ಎಪಿ/ಪಿಟಿಐ ಚಿತ್ರ   

ಇಸ್ಲಾಮಾಬಾದ್: ಅವಿಶ್ವಾಸ ನಿರ್ಣಯದಲ್ಲಿ ಸೋಲುವುದಕ್ಕೂ ಮುನ್ನ, ಪ್ರಧಾನಿ ಇಮ್ರಾನ್ ಖಾನ್ ಅವರು ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರನ್ನು ಬದಲಿಸಲು ತಡರಾತ್ರಿ ಭಾರಿ ಯತ್ನ ನಡೆಸಿದ್ದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ತಮಗೆ ವಿಧೇಯರಾಗಿರುವ ಹಾಗೂ ತಮ್ಮ ಪದಚ್ಯುತಿಗೆ ವಿದೇಶಿ ಕೈವಾಡ ನಡೆದಿದೆ ಎಂದು ನಂಬಿರುವ ವ್ಯಕ್ತಿಯನ್ನು ಸೇನಾ ಮುಖ್ಯಸ್ಥ ಹುದ್ದೆಗೆ ತರುವ ಯತ್ನ ಮಾಡಿದ್ದರು ಎನ್ನಲಾಗಿದೆ. ಆದರೆ, ತಡರಾತ್ರಿ ಅವರು ರಾಜೀನಾಮೆ ಸಲ್ಲಿಸುವುದರೊಂದಿಗೆ, ಸರ್ಕಾರ ಹಾಗೂ ಸೇನೆಯ ನಡುವಣ ಸಂಭಾವ್ಯ ಸಂಘರ್ಷ ತಪ್ಪಿತು.

‘ಆಹ್ವಾನಿತರಲ್ಲದ ಇಬ್ಬರು ಅತಿಥಿಗಳನ್ನು ಹೊತ್ತ ಹೆಲಿಕಾಪ್ಟರ್‌ವೊಂದು ಭಾನುವಾರ ರಾತ್ರಿ ಪ್ರಧಾನಿ ನಿವಾಸದಲ್ಲಿ ಇಳಿಯಿತು. ಇವರು ಸೇನಾ ಬೆಂಗಾವಲಿನಲ್ಲಿ ಬಂದಿಳಿದರು. ಇಮ್ರಾನ್ ಖಾನ್ ಅವರ ಜೊತೆ ಇವರು 45 ನಿಮಿಷ ಮಾತುಕತೆ ನಡೆಸಿದರು’ ಎಂದು ಬಿಬಿಸಿ ಉರ್ದು ಸುದ್ದಿವಾಹಿನಿ ವರದಿ ಮಾಡಿದೆ. ಆದರೆ ಈ ಸಭೆಯ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

ADVERTISEMENT

ಉನ್ನತ ಅಧಿಕಾರಿಗಳ ಪೈಕಿ ಒಬ್ಬರನ್ನು ತೆಗೆದುಹಾಕಿದ್ದ ಇಮ್ರಾನ್, ಹೊಸಬರನ್ನು ನೇಮಿಸಿದ್ದರು. ಆ ಅಧಿಕಾರಿ ತಮ್ಮನ್ನು ಭೇಟಿ ಮಾಡಲು ಹೆಲಿಕಾಪ್ಟರ್‌ನಲ್ಲಿ ಬರಲಿದ್ದಾರೆ ಎಂದು ಇಮ್ರಾನ್ ನಿರೀಕ್ಷಿಸಿದ್ದರು. ಆದರೆ ಹೆಲಿಕಾಪ್ಟರ್‌ನಲ್ಲಿ ಬಂದವರು, ಇಮ್ರಾನ್ ನಿರೀಕ್ಷಿಸಿದ್ದ ವ್ಯಕ್ತಿ ಆಗಿರಲಿಲ್ಲ ಎಂದು ವರದಿ ತಿಳಿಸಿದೆ.

ಪ್ರಸಕ್ತ ರಾಜಕೀಯ ಗೊಂದಲವನ್ನು ತಗ್ಗಿಸುವ ಸಮರ್ಥ ವ್ಯಕ್ತಿಯನ್ನುಇಮ್ರಾನ್ ನೇಮಿಸಿದ್ದರು ಎನ್ನಲಾಗಿದ್ದು, ಅವರ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ಇಮ್ರಾನ್ ಅವರ ನೇಮಕ
ವನ್ನು ರಕ್ಷಣಾ ಸಚಿವಾಲಯ ಅನುಮೋದಿಸಿ ಅಧಿಸೂಚನೆ ಹೊರಡಿಸದ ಕಾರಣ, ಇಮ್ರಾನ್ ಅವರು ಬಯಸಿದ್ದ ‘ಬದಲಾವಣೆ’ ಸಾಧ್ಯವಾಗಲಿಲ್ಲ.

ಆಹ್ವಾನಿತರಲ್ಲದ ಆ ಇಬ್ಬರು ಅತಿಥಿಗಳು ಯಾರು ಎಂದು ಬಿಬಿಸಿ ವರದಿ ನೇರವಾಗಿ ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ ವರದಿಯ ಧಾಟಿಯನ್ನು ಗಮನಿಸಿದರೆ, ಒಬ್ಬರು ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಹಾಗೂ ಐಎಸ್‌ಐ ಮುಖ್ಯಸ್ಥ ಲೆ.ಜ. ನದೀಮ್ ಅಹ್ಮದ್ ಅಂಜುಮ್ ಎನ್ನಲಾಗಿದೆ.

ಆದರೆ ಈ ವರದಿಯನ್ನು ಐಎಸ್‌ಐ ಮಾಧ್ಯಮ ವಿಭಾಗ ಅಲ್ಲಗಳೆದಿದೆ. ವರದಿಯು ಸಂಪೂರ್ಣ ಆಧಾರರಹಿತ ಹಾಗೂ ಸುಳ್ಳಿನಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದೆ.

ಬಾಜ್ವಾ ಉಳಿಸಲು ಕೋರ್ಟ್‌ ಮೊರೆ

ಇಸ್ಲಾಮಾಬಾದ್‌ ಹೈಕೋರ್ಟ್‌ನಲ್ಲಿ ಶನಿವಾರ ರಾತ್ರಿ ತುರ್ತು ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಬಾಜ್ವಾ ಅವರನ್ನು ಪದಚ್ಯುತಿ ಮಾಡುವುದರಿಂದ ಇಮ್ರಾನ್ ಅವರನ್ನು ತಡೆಯಬೇಕು ಎಂದು ಅದರಲ್ಲಿ ಮನವಿ ಮಾಡಲಾಗಿದೆ.ಮತ್ತೊಂದೆಡೆ, ಜಾಬ್ವಾ ಅವರ ಸಂಭಾವ್ಯ ಪದಚ್ಯುತಿ ಯತ್ನ ಪ್ರಶ್ನಿಸಿ ವಕೀಲ ಅದ್ನಾನ್ ಇಕ್ಬಾಲ್ ಎಂಬುವರು ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಬಾಜ್ವಾ ಅವರನ್ನು ತೆಗೆದುಹಾಕಲು ಕೆಲವೊಂದು ತಾಂತ್ರಿಕ ಅಡಚಣೆಗಳಿವೆ. ಸೇನಾ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆಯಲು ಅಧಿಕೃತ ಪ್ರಕಟಣೆಗಳು ಮುಖ್ಯ ಆಧಾರ.ಹೀಗಾಗಿ ಅರ್ಜಿ ಸಿದ್ಧವಾಗಿದ್ದರೂ ಇನ್ನೂ ಸಲ್ಲಿಸಲಾಗಿಲ್ಲ. ತಮ್ಮ ಮೆಚ್ಚಿನ ಪತ್ರಕರ್ತರ ತಂಡದ ಜೊತೆ ಮಾತನಾಡಿರುವ ಇಮ್ರಾನ್, ಬಾಜ್ವಾ ಅವರನ್ನು ಬದಲಿಸುವ ಉದ್ದೇಶ ತಮಗಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.