ADVERTISEMENT

ಜಪಾನ್‌: ಸುಗಾ ನೂತನ ಪ್ರಧಾನಿಯಾಗುವ ಸಾಧ್ಯತೆ

ರಾಯಿಟರ್ಸ್
Published 30 ಆಗಸ್ಟ್ 2020, 7:57 IST
Last Updated 30 ಆಗಸ್ಟ್ 2020, 7:57 IST
ಯೋಶಿಹಿದೆ ಸುಗಾ
ಯೋಶಿಹಿದೆ ಸುಗಾ   

ಟೋಕಿಯೊ: ಜಪಾನ್‌ನ ನೂತನ ಪ್ರಧಾನಿ ಹುದ್ದೆಗೆ ಯೋಶಿಹಿದೆ ಸುಗಾ ಆಯ್ಕೆಯಾಗುವ ಸಾಧ್ಯತೆಗಳಿವೆ.

ಅನಾರೋಗ್ಯದ ಕಾರಣ ಶಿಂಜೊ ಅಬೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಉತ್ತರಾಧಿಕಾರಿಯ ಆಯ್ಕೆ ಕುರಿತು ಚರ್ಚೆಗಳು ಆರಂಭವಾಗಿವೆ. ಶಿಂಜೊ ಅಬೆ ಅವರಿಗೆ ಹಲವು ವರ್ಷಗಳಿಂದ ಆಪ್ತರಾಗಿರುವ ಸುಗಾ ಅವರೇ ಈ ಹುದ್ದೆ ಅಲಂಕರಿಸಬಹುದು ಎನ್ನುವ ವರದಿಗಳು ದಟ್ಟವಾಗಿವೆ.

ಆದರೆ, ಪ್ರಧಾನಿ ಹುದ್ದೆ ಅಲಂಕರಿಸುವುದಿಲ್ಲ ಎಂದು 71 ವರ್ಷದ ಸುಗಾ ತಿಳಿಸಿದ್ದಾರೆ. ಕೆಲವು ಆಕಾಂಕ್ಷಿಗಳು ಪ್ರಧಾನಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ADVERTISEMENT

ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷವು (ಎಲ್‌ಡಿಪಿ) ಹೊಸ ನಾಯಕನನ್ನು ಶೀಘ್ರ ಆಯ್ಕೆ ಮಾಡಲಿದೆ.

‘ಅಬೆ ಅವರ ಸ್ಥಾನದಲ್ಲಿ ಸುಗಾ ಅವರನ್ನು ಎಲ್‌ಡಿಪಿ ಆಯ್ಕೆ ಮಾಡುತ್ತದೆ. ಈ ಮೂಲಕ ಅಬೆ ಸರ್ಕಾರವೇ ಮುಂದುವರಿಯುತ್ತದೆ. ಆದರೆ, ಅಬೆ ಆ ಹುದ್ದೆಯಲ್ಲಿ ಇರುವುದಿಲ್ಲ’ ಎಂದು ಸೋಫಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಕೋಯಿಚಿ ನಕನಾ ವಿವರಿಸಿದ್ದಾರೆ.

2012ರಲ್ಲಿ ಸುಗಾ ಅವರನ್ನು ಪ್ರಮುಖ ಹುದ್ದೆಯಾದ ಮುಖ್ಯ ಸಂಪುಟ ಕಾರ್ಯದರ್ಶಿಯನ್ನಾಗಿ ಅಬೆ ನೇಮಿಸಿದ್ದರು.

ಮಾಜಿ ರಕ್ಷಣಾ ಸಚಿವ ಶಿಗೆರು ಇಷಿಬಾ ಸಹ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಅಬೆ ಅವರ ಟೀಕಾಕಾರರಾಗಿರುವ ಇಷಿಬಾ ಸಾರ್ವಜನಿಕ ವಲಯದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಆದರೆ, ಪಕ್ಷದ ಸಂಸದರ ಜತೆ ಉತ್ತಮ ಬಾಂಧವ್ಯ ಹೊಂದಿಲ್ಲ ಎಂದು ವಿಶ್ಲೇಷಿಸಲಾಗಿದೆ.

ಮಾಜಿ ವಿದೇಶಾಂಗ ಸಚಿವ ಫುಮಿಯೊ ಕಿಶಿದಾ, ರಕ್ಷಣಾ ಸಚಿವ ತಾರೊ ಕೊನಾ, ಪರಿಸರ ಸಚಿವ ಶಿಂಜಿರೊ ಕೊಯಿಝುಮಿ ಅವರ ಹೆಸರುಗಳು ಸಹ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.