ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಮತೋಲನದ ಅಗತ್ಯ: ಭಾರತ

ಸರದಿ ಪ್ರಕಾರ ಆಗಸ್ಟ್‌ 1ರಿಂದ ಭಾರತಕ್ಕೆ ಅಧ್ಯಕ್ಷ ಸ್ಥಾನ

ಪಿಟಿಐ
Published 25 ಜುಲೈ 2021, 6:24 IST
Last Updated 25 ಜುಲೈ 2021, 6:24 IST
ಟಿ.ಎಸ್‌. ತಿರುಮೂರ್ತಿ
ಟಿ.ಎಸ್‌. ತಿರುಮೂರ್ತಿ   

ವಿಶ್ವಸಂಸ್ಥೆ: ’ಸ್ವತಂತ್ರವಾದ ವಿದೇಶಾಂಗ ನೀತಿ ಹೊಂದಿರುವ ಭಾರತದಂತಹ ಅತಿ ದೊಡ್ಡ ರಾಷ್ಟ್ರವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸ್ವಾಗತಿಸಲಾಗುತ್ತಿದೆ. ಈ ಮೂಲಕ ಮಂಡಳಿಯಲ್ಲೂ ಸಮತೋಲನ ಕಾಪಾಡಲಾಗಿದೆ. ಇದು ಅಗತ್ಯವಿತ್ತು’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿಹೇಳಿದ್ದಾರೆ.

ಸರದಿ ಪ್ರಕಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಭಾರತ ಆಗಸ್ಟ್‌ 1ರಂದು ವಹಿಸಿಕೊಳ್ಳಲಿದೆ. 15 ರಾಷ್ಟ್ರಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ಕಾಯಂ ಸದಸ್ಯತ್ವವಲ್ಲದ ರಾಷ್ಟ್ರವಾಗಿ 2021–22ರ ಅವಧಿಯಲ್ಲಿ ಭಾರತ ಮೊದಲ ಬಾರಿ ಈ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಹಿನ್ನೆಲೆಯಲ್ಲಿ ತಿರುಮೂರ್ತಿ ಅವರು ಭಾರತದ ನಿಲುವುಗಳು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್‌, ರಷ್ಯಾ, ಬ್ರಿಟನ್‌ ಮತ್ತು ಅಮೆರಿಕ ಹೊಂದಿರುವ ವಿಟೊ ಅಧಿಕಾರವನ್ನು ಪ್ರಸ್ತಾಪಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

‘ಮಹತ್ವದ ಸನ್ನಿವೇಶ ಮತ್ತು ಸಂದರ್ಭದಲ್ಲಿ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿದೆ. ಕೋವಿಡ್‌ ಸಾಂಕ್ರಾಮಿಕ ಕಾಯಿಲೆಯ ಸಂಕಷ್ಟದ ಜತೆಗೆ ಹಲವು ಬಿಕ್ಕಟ್ಟುಗಳನ್ನು ಎದುರಿಸಲಾಗುತ್ತಿದೆ. ಒಗ್ಗಟ್ಟಿನಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಿದೆ’ ಎಂದು ಅವರು ತಿರುಮೂರ್ತಿ ಹೇಳಿದ್ದಾರೆ.

‘ಭಾರತ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರಿಂದ ಹಿಂದೆ ಸರಿದಿಲ್ಲ ಮತ್ತು ಭಯಪಟ್ಟಿಲ್ಲ. ಭಾರತ ಸದಾ ತನ್ನ ನಿಲುವುಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸಿದೆ’ ಎಂದು ಹೇಳಿದ್ದಾರೆ.

ಮ್ಯಾನ್ಮಾರ್‌ ಮತ್ತು ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಅವರು, ’ಈ ದೇಶಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಂಡಳಿಯಲ್ಲಿ ಚರ್ಚೆಯಾಗುವಂತೆ ಭಾರತ ಒತ್ತಾಯಿಸಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.