ADVERTISEMENT

ಭಾರತ, ಚೀನಾದ ದ್ವಿಪಕ್ಷೀಯ ಸಂಬಂಧ ‘ಕೆಟ್ಟ ಹಾದಿಯಲ್ಲಿ’ ಸಾಗುತ್ತಿದೆ: ಜೈಶಂಕರ್‌

ಪಿಟಿಐ
Published 19 ನವೆಂಬರ್ 2021, 5:53 IST
Last Updated 19 ನವೆಂಬರ್ 2021, 5:53 IST
ಎಸ್‌. ಜೈಶಂಕರ್‌
ಎಸ್‌. ಜೈಶಂಕರ್‌   

ಸಿಂಗಪುರ: ಒಪ್ಪಂದಗಳನ್ನು ಉಲ್ಲಂಘಿಸಿ ಬೀಜಿಂಗ್‌ ಹಲವು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧ ‘ಕೆಟ್ಟ ಹಾದಿಯಲ್ಲಿ’ ಸಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಶುಕ್ರವಾರ ಹೇಳಿದ್ದಾರೆ.

ಒಪ್ಪಂದಗಳನ್ನು ಉಲ್ಲಂಘಿಸಿರುವ ಚೀನಾ ಇಲ್ಲಿಯವರೆಗೂ ಅದಕ್ಕೆ ವಿಶ್ವಾಸಾರ್ಹ ವಿವರಣೆ ನೀಡಿಲ್ಲ ಎಂದಿರುವ ಅವರು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಎಲ್ಲಿಗೆ ಕೊಂಡೊಯ್ಯಲು ಬೀಜಿಂಗ್‌ ಬಯಸುತ್ತಿದೆ ಎಂಬುದನ್ನು ಚೀನಾದ ನಾಯಕತ್ವವೇ ತಿಳಿಸಬೇಕು ಎಂದಿದ್ದಾರೆ.

ಬ್ಲೂಮ್‌ಬರ್ಗ್‌ನ ನ್ಯೂ ಎಕನಾಮಿಕ್‌ ಫೋರಂ ಹಮ್ಮಿಕೊಂಡಿದ್ದ ‘ಗ್ರೇಟರ್ ಪವರ್ ಕಾಂಪಿಟೇಷನ್: ದಿ ಎಮರ್ಜಿಂಗ್ ವರ್ಲ್ಡ್ ಆರ್ಡರ್’ ಕುರಿತ ಸಂವಾದದಲ್ಲಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಉಭಯ ದೇಶಗಳ ನಡುವಿನ ಸಂಬಂಧ ಈಗ ಹೇಗಿದೆ ಮತ್ತು ಅದು ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಚೀನಾಕ್ಕೆ ಅರಿವಿದೆ. ಸಂಬಂಧ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂಬುದೂ ಅವರಿಗೆ ತಿಳಿದಿದೆ. ನಾನು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದೇನೆ. ಆ ಸಂದರ್ಭದಲ್ಲೆಲ್ಲ ನ್ಯಾಯಯುತವಾಗಿಯೇ ಮಾತನಾಡಿದ್ದೇನೆ. ಸ್ಪಷ್ಟ ಮತ್ತು ಸಮಂಜಸವಾಗಿಯೇ ಎಲ್ಲವನ್ನೂ ತಿಳಿಸಿದ್ದೇನೆ’ ಎಂದು ಅವರು ಹೇಳಿದರು.

ಚೀನಾದ ನಡವಳಿಕೆಗಳು ನಮ್ಮೊಂದಿಗಿನ ಸಂಬಂಧವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ಈ ಬಗ್ಗೆ ಮರು ಚಿಂತನೆ ನಡೆಸಬೇಕಾದ ಅಗತ್ಯವಿದೆ. ಇದಕ್ಕೆಲ್ಲ ಚೀನಾವೇ ಉತ್ತರ ನೀಡಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.