ADVERTISEMENT

ಬಾಂಗ್ಲಾ ಸುವರ್ಣ ಸ್ವಾತಂತ್ರ್ಯ ಮಹೋತ್ಸವ: ಮುಂದಿನವಾರ ಢಾಕಾಗೆ ಪ್ರಧಾನಿ ಮೋದಿ ಭೇಟಿ

ಬಾಂಗ್ಲಾದೊಂದಿಗೆ ಮೂರು ಒಡಂಬಡಿಕೆಗಳಿಗೆ ಸಹಿ ಹಾಕುವ ಸಾಧ್ಯತೆ

ಪಿಟಿಐ
Published 16 ಮಾರ್ಚ್ 2021, 8:16 IST
Last Updated 16 ಮಾರ್ಚ್ 2021, 8:16 IST
ಎ.ಕೆ.ಅಬ್ದುಲ್ ಮೊಮೆನ್‌(ಎಡಬದಿ)
ಎ.ಕೆ.ಅಬ್ದುಲ್ ಮೊಮೆನ್‌(ಎಡಬದಿ)   

ಢಾಕಾ: ಬಾಂಗ್ಲಾದೇಶದ ಸುವರ್ಣ ಸ್ವಾತಂತ್ರ್ಯ ಮಹೋತ್ಸವ ಹಾಗೂ ರಾಷ್ಟ್ರಪಿತ ಬಂಗಬಂಧು ಶೇಖ್‌ ಮುಜಿಬುರ್‌ ರಹಮಾನ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂದಿನವಾರಢಾಕಾಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಬಾಂಗ್ಲಾದೊಂದಿಗೆ ಮೂರು ಒಡಂಬಡಿಕೆಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.

‘ಬಾಂಗ್ಲಾ ಭೇಟಿಯಲ್ಲಿ ಪ್ರಧಾನಿ ನರೇಂದ್ರಮೋದಿಯವರು ಢಾಕಾದ ಹೊರವಲಯದ ಮೂರು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಉಭಯ ರಾಷ್ಟ್ರಗಳ ನಾಯಕರು ಮೂರು ಒಡಂಬಡಿಕೆಗಳಿಗೆ (ಎಂಒಯು) ಸಹಿ ಹಾಕಲಿದ್ದಾರೆ. ಸದ್ಯ ಈ ಮೂರು ಎಂಒಯುಗಳು ಇನ್ನೂ ಅಂತಿಮಗೊಂಡಿಲ್ಲ‘ ಎಂದು ಮೊಮೆನ್ ಹೇಳಿದರು.

‘ವಿಪತ್ತು ನಿರ್ವಹಣೆ ಮತ್ತು ಎರಡು ರಾಷ್ಟ್ರಗಳಲ್ಲಿರುವ ಕೆಲವು ಸಂಸ್ಥೆಗಳೊಂದಿಗಿನ ಪರಸ್ಪರ ಸಹಕಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ‘ ಎಂದು ವಿದೇಶಾಂಗ ಕಾರ್ಯದರ್ಶಿ ಮೊಮೆನ್ ಹೇಳಿದ್ದಾರೆ. ‌

ADVERTISEMENT

ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ, ನೇಪಾಳ, ಶ್ರೀಲಂಕಾ, ಭೂತಾನ್ ಮತ್ತು ಮಾಲ್ಡೀವ್ಸ್‌ ರಾಷ್ಟ್ರಗಳ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ದಿನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಯಾವುದೇ ಶೃಂಗಸಭೆಗಳಿಲ್ಲದೆಯೂ, ಐದು ರಾಷ್ಟ್ರಗಳ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಇದು ಬಾಂಗ್ಲಾದೇಶದ ಪಾಲಿಗೆ ಐತಿಹಾಸಿಕ ಕಾರ್ಯಕ್ರಮವಾಗಲಿದೆ‘ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಕ್‌ ಅಬ್ದುಲ್ ಮೊಮೆನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಕೋವಿಡ್‌ 19 ಸಾಂಕ್ರಾಮಿಕದ ನಡುವೆಯೂ ನೆರೆ ಹೊರೆಯ ರಾಷ್ಟ್ರಗಳ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರಪಿತರಿಗೆ ಗೌರವ ಸಲ್ಲಿಸುತ್ತಿದ್ದಾರೆ‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.