ADVERTISEMENT

ಭಾರತೀಯರಿಗೆ ಲಾಭವಾಗಬೇಕೆಂದೇ ರಷ್ಯಾದಿಂದ ತೈಲ ಖರೀದಿ: ಜೈಶಂಕರ್‌

ಪಿಟಿಐ
Published 17 ಆಗಸ್ಟ್ 2022, 14:26 IST
Last Updated 17 ಆಗಸ್ಟ್ 2022, 14:26 IST
ಜೈಶಂಕರ್
ಜೈಶಂಕರ್   

ಬ್ಯಾಂಕಾಕ್‌: ‘ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಭಾರತದ ಜನರಿಗೆ ಉತ್ತಮ ವ್ಯವಹಾರ ಕುದುರಿಸುವುದೇ ದೇಶದ ನಿಲುವಾಗಿತ್ತು‌’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಪ್ರತಿಪಾದಿಸಿದ್ದಾರೆ.

ಭಾರತ– ಥಾಯ್ಲೆಂಡ್‌ನ ಜಂಟಿ ಆಯೋಗದ 9ನೇ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ಇಲ್ಲಿಗೆ ಬಂದ ಸಚಿವರು, ಭಾರತದ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು.

ಅಮೆರಿಕ ಮತ್ತು ಇತರ ಕೆಲ ದೇಶಗಳಿಗೆ ಭಾರತದ ಈ ಕ್ರಮ ಇಷ್ಟವಾಗದಿರಬಹುದು. ಆದರೆ ಈ ವಿಚಾರವನ್ನು ದೇಶ ಸಮರ್ಥಿಸಿಕೊಳ್ಳುವುದಿಲ್ಲ ಎಂದಿರುವ ಅವರು, ದೇಶದ ಜನರಿಗೆ ಉತ್ತಮ ವ್ಯವಹಾರ ಕುದುರಿಸುವುದು ಸರ್ಕಾರದ ನೈಜ ಕರ್ತವ್ಯ ಎಂಬುದನ್ನು ಅವರಿಗೆ ಅರ್ಥ ಮಾಡಿಸಲಾಗಿದೆ ಎಂದು ಹೇಳಿದರು.

ADVERTISEMENT

ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲವು ಏಪ್ರಿಲ್‌– ಜೂನ್‌ ಅವಧಿಯಲ್ಲಿ 50 ಪಟ್ಟು ಹೆಚ್ಚಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೇ ತಿಂಗಳಲ್ಲಿ ರಷ್ಯಾ ದೇಶವು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಭಾರತದ ಎರಡನೇ ಅತಿದೊಡ್ಡ ತೈಲ ಪೂರೈಕೆದಾರ ದೇಶವಾಗಿ ಬೆಳೆಯಿತು. ಭಾರತಕ್ಕೆ ತೈಲ ಪೂರೈಕೆಯಲ್ಲಿ ಇರಾನ್‌ ಮೊದಲ ಸ್ಥಾನದಲ್ಲಿದೆ. ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ರಷ್ಯಾ ಕಚ್ಚಾ ತೈಲ ಪೂರೈಕೆ ಮೇಲೆ ಹೆಚ್ಚಿನ ರಿಯಾಯಿತಿ ನೀಡುತ್ತಿದೆ.

ಭಾರತೀಯ ತೈಲ ಸಂಸ್ಕರಣಾಗಾರರು ಮೇ ತಿಂಗಳಲ್ಲಿ ಸುಮಾರು 25 ಮಿಲಿಯನ್‌ ಬ್ಯಾರೆಲ್‌ ತೈಲವನ್ನು ರಷ್ಯಾದಿಂದ ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.