ADVERTISEMENT

ಹಿತಾಸಕ್ತಿಗೆ ಸಿಗದ ಸಹಮತ: ಆರ್‌ಸಿಇಪಿ ತಿರಸ್ಕರಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 18:53 IST
Last Updated 4 ನವೆಂಬರ್ 2019, 18:53 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬ್ಯಾಂಕಾಕ್‌: ಭಾರತದ ತಯಾರಿಕಾ ವಲಯ ಮತ್ತು ಹೈನುಗಾರಿಕೆಗೆ ಧಕ್ಕೆ ತರಲಿದೆ ಎಂಬ ಆತಂಕಕ್ಕೆ ಕಾರಣವಾಗಿದ್ದಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದವನ್ನು ಭಾರತ ತಿರಸ್ಕರಿಸಿದೆ.

ಭಾರತವನ್ನು ಬಿಟ್ಟು ಉಳಿದ 15 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡಿವೆ. ವಿಯೆಟ್ನಾಂನಲ್ಲಿ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆರ್‌ಸಿಇಪಿ ಶೃಂಗಸಭೆಯಲ್ಲಿ ಈ ರಾಷ್ಟ್ರಗಳುಒಪ್ಪಂದಕ್ಕೆ ಸಹಿ ಹಾಕಲಿವೆ.

ಸದಸ್ಯ ರಾಷ್ಟ್ರಗಳ ನಡುವೆ ಸುಂಕ ರಹಿತ ವ್ಯಾಪಾರಕ್ಕೆ ಅವಕಾಶ ಕೊಡುವುದರಿಂದ,ಈ ಒಪ್ಪಂದವು ನಮ್ಮ ಆರ್ಥಿಕತೆಯನ್ನು ಅಸ್ಥಿರಗೊಳಿಸುತ್ತದೆ. ಹೀಗಾಗಿ ಕೆಲವು ಸರಕುಗಳ ಮೇಲೆ ಸುಂಕ ಜಾರಿಯಲ್ಲಿರಲು ಅವಕಾಶ ನೀಡಬೇಕು ಎಂದು ಭಾರತವು ಪಟ್ಟು ಹಿಡಿದಿತ್ತು. ಇದಕ್ಕೆ ಉಳಿದ ರಾಷ್ಟ್ರಗಳು ಸಹಮತ ಸೂಚಿಸಲಿಲ್ಲ. ಹೀಗಾಗಿ ಒಪ್ಪಂದವನ್ನು ತಿರಸ್ಕರಿಸಲಾಯಿತು ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿದೆ.

ADVERTISEMENT

2012ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಈ ಒಪ್ಪಂದದ ಮಾತುಕತೆ ಆರಂಭವಾಗಿತ್ತು. ಕೆಲವು ಸರಕುಗಳನ್ನು ಸುಂಕರಹಿತ ವ್ಯಾಪಾರದಿಂದ ಹೊರಗೆ ಇಡಬೇಕು ಎಂದು ಅಂದಿನ ಸರ್ಕಾರ ಪ್ರತಿಪಾದಿಸಿತ್ತು. ನಂತರದ ಸರ್ಕಾರಗಳೂ ಇದನ್ನೇ ಪ್ರತಿಪಾದಿಸಿದವು.

ಹೀಗಾಗಿ ಒಪ್ಪಂದ ಅಂತಿಮವಾಗಿರಲಿಲ್ಲ. ಆದರೆ, ಈಗ ಒಪ್ಪಂದ ಅಂತಿಮವಾಗಲೇಬೇಕು ಎಂದು ಚೀನಾ ಆಗ್ರಹಿಸಿತು. ಹೀಗಾಗಿ ಭಾರತವನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡು, ಉಳಿದ ರಾಷ್ಟ್ರಗಳು ಒಪ್ಪಂದದ ಕರಡನ್ನು ಅಂತಿಮಗೊಳಿಸಿವೆ.

ಈ ಒಪ್ಪಂದದ ವಿರುದ್ಧ ದೇಶದಾದ್ಯಂತ ರೈತ ಮತ್ತು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

**

ಈ ಒಪ್ಪಂದದ ಸ್ವರೂಪವುಆರ್‌ಸಿಇಪಿ ರಚನೆಯ ಹಿಂದಿನ ಮೂಲ ಉದ್ದೇಶಕ್ಕಿಂತ ಭಿನ್ನವಾಗಿದೆ. ಭಾರತದ ಆತಂಕಗಳಿಗೆ ಕರಡು ಒಪ್ಪಂದದಲ್ಲಿ ಪರಿಹಾರಗಳಿಲ್ಲ. ಹೀಗಾಗಿ ಒಪ್ಪಂದವನ್ನು ತಿರಸ್ಕರಿಸಲಾಯಿತು.
-ನರೇಂದ್ರ ಮೋದಿ,ಪ್ರಧಾನಿ

**
ಭಾರತವು ಈ ಒಕ್ಕೂಟದ ಸದಸ್ಯತ್ವ ಪಡೆಯುವ ಬಗ್ಗೆ ಮತ್ತೆ ಯೋಚಿಸುತ್ತದೆ ಎಂಬ ಭರವಸೆ ನಮಗಿದೆ. ಭಾರತಕ್ಕಾಗಿ ನಮ್ಮ ಬಾಗಿಲು ಸದಾ ತೆರೆದಿರುತ್ತದೆ.
-ಸಿಮೊನ್ ಬರ್ಮಿಂಗ್‌ಹ್ಯಾಂ,ಆಸ್ಟ್ರೇಲಿಯಾ ವಾಣಿಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.