ADVERTISEMENT

ಅಮೆರಿಕದ ವರದಿ ತಿರಸ್ಕರಿಸಿದ ಭಾರತ

ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:07 IST
Last Updated 23 ಜೂನ್ 2019, 19:07 IST
ರವೀಶ್‌ ಕುಮಾರ್‌
ರವೀಶ್‌ ಕುಮಾರ್‌   

ನವದೆಹಲಿ (ರಾಯಿಟರ್ಸ್): ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಪ್ರಕಟಿಸಿರುವ ‘ಧಾರ್ಮಿಕ ಸ್ವಾತಂತ್ರ್ಯ’ ವರದಿಯನ್ನು ತಿರಸ್ಕರಿಸಿರುವ ಭಾರತ, ‘ಭಾರತೀಯ ನಾಗರಿಕರ ಸಾಂವಿಧಾನಿಕವಾಗಿ ರಕ್ಷಿಸಲಾದ ಹಕ್ಕುಗಳ ಬಗ್ಗೆ ಟೀಕೆ ಮಾಡುವ ಅಧಿಕಾರ ಯಾವುದೇ ದೇಶಕ್ಕೆ ಇಲ್ಲ’ ಎಂದು ಭಾನುವಾರ ಸ್ಪಷ್ಟಪಡಿಸಿದೆ.

ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿರುವ 2018ನೇ ಸಾಲಿನ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯಲ್ಲಿ ‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ ವಿಫಲ
ವಾಗಿದೆ’ ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ವರದಿಯು ಮುಖ್ಯವಾಗಿ 2018ರಲ್ಲಿ ಮುಸಲ್ಮಾನರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳನ್ನು ಉಲ್ಲೇಖಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷವಾದ ಬಿಜೆಪಿಯ ಕೆಲ ಮುಖಂಡರು ಕಳೆದ ವರ್ಷ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಭಾಷಣ ಮಾಡಿದ್ದರು. ಹಿಂದೂಗಳ ಆಕ್ರೋಶಿತ ಗುಂಪುಗಳು ಅಲ್ಪಸಂಖ್ಯಾತ ಸಮುದಾಯದವರ, ಮುಖ್ಯವಾಗಿ ಮುಸಲ್ಮಾನರ ಮೇಲೆ ದೌರ್ಜನ್ಯ ಎಸಗಿವೆ. ಮಾಂಸಕ್ಕಾಗಿಮುಸಲ್ಮಾನರು ಗೋಹತ್ಯೆ ನಡೆಸುತ್ತಿದ್ದಾರೆ ಎಂಬ ವದಂತಿ ಕಾರಣದಿಂದ ಬಹುತೇಕ ಇಡೀ ವರ್ಷ ಇಂಥ ದೌರ್ಜನ್ಯ ನಡೆದವು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ವರದಿಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ಕುಮಾರ್‌, ‘ಭಾರತದ ಸಂವಿಧಾನವು ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲಾ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತದೆ.

ಹೀಗಿರುವಾಗ ನಮ್ಮ ನಾಗರಿಕರ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡುವ ಅಧಿಕಾರ ವಿದೇಶಿ ಸಂಸ್ಥೆ ಅಥವಾ ಸರ್ಕಾರಕ್ಕೆ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಭಾರತಕ್ಕೆ ತನ್ನ ಜಾತ್ಯತೀತ ಸಿದ್ಧಾಂತದ ಬಗ್ಗೆ ಹೆಮ್ಮೆ ಇದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಬಹುಸಂಸ್ಕೃತಿಯ ಸಮಾಜವಾಗಿ, ದೀರ್ಘಕಾಲದಿಂದ ಸಹಿಷ್ಣುತೆ ಸಾಧಿಸಿ ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರ ಎನಿಸಿಕೊಂಡಿರುವ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.