ADVERTISEMENT

ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವೇ ಭಾರತದ ಆಶಯ: ಮಧುಸೂದನ್

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಕಾಯಂ ಮಿಷನ್ ಸಲಹೆಗಾರ

ಪಿಟಿಐ
Published 12 ಜೂನ್ 2021, 8:26 IST
Last Updated 12 ಜೂನ್ 2021, 8:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ‘ಪಾಕಿಸ್ತಾನ ಸೇರಿದಂತೆ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಭಾರತ ಬಯಸುತ್ತದೆ. ಆದರೆ, ಇಂಥ ಪೂರಕ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ‘ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಸಲಹೆಗಾರ ಆರ್‌. ಮಧುಸೂದನ್‌ ಹೇಳಿದ್ದಾರೆ.

ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ತನ್ನ ಭೂ ಪ್ರದೇಶವನ್ನು ಬಳಸಲು ಅನುಮತಿಸದಿದ್ದರೆ ಇಂಥ ವಾತಾವರಣ ನಿರ್ಮಾಣವಾಗಲು ಸಾಧ್ಯವಿದೆ ಎಂದು ಮಧುಸೂದನ್ ಅಭಿಪ್ರಾಯಪಟ್ಟಿದ್ದಾರೆ.

‘2020ರ ಭದ್ರತಾ ಮಂಡಳಿಯ ವರದಿ‘ ಕುರಿತು ಶುಕ್ರವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಧುಸೂದನ್‌ ಈ ವಿಷಯವನ್ನು ತಿಳಿಸಿದ್ದಾರೆ.

ADVERTISEMENT

‘ಪಾಕಿಸ್ತಾನ ಸೇರಿದಂತೆ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಲು ಭಾರತ ಬಯಸುತ್ತದೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ರಹಿತ ವಾತಾವರಣದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿರುವ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಬೇಕು ಎಂಬುದು ನಮ್ಮ ಸ್ಪಷ್ಟ ನಿಲುವಾಗಿದೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮುನೀರ್ ಅಕ್ರಮ್, ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಧುಸೂದನ್, ‘ಪಾಕಿಸ್ತಾನ ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸುತ್ತಿರುವುದು ದುರದೃಷ್ಟಕರ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.