
ಕೊಲಂಬೊ: ‘ದಿತ್ವಾ’ ಚಂಡಮಾರುತದಿಂದ ಉಂಟಾದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತವು ಸಂಚಾರಿ ಆಸ್ಪತ್ರೆ ಹಾಗೂ 70 ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿದೆ.
‘ಭಾರತೀಯ ವಾಯುಪಡೆಯ ಸಿ–17 ಗ್ಲೋಬ್‌ಮಾಸ್ಟರ್ ವಿಮಾನವು ಆಗ್ರಾದಿಂದ ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಸಂಚಾರಿ ಆಸ್ಪತ್ರೆ ಹಾಗೂ 70 ವೈದ್ಯಕೀಯ ಸಿಬ್ಬಂದಿಯನ್ನು ಹೊತ್ತು ಕೊಲಂಬೊದಲ್ಲಿ ಮಂಗಳವಾರ ಸಂಜೆ ಇಳಿದಿದೆ’ ಎಂದು ಭಾರತೀಯ ಹೈಕಮಿಷನ್ ಕಚೇರಿಯು ಬುಧವಾರ ತಿಳಿಸಿದೆ.
ಐಎಎಫ್ ಎಂಐ–17 ಹೆಲಿಕಾಪ್ಟರ್‌ಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, 8 ಟನ್‌ಗಳಿಗೂ ಹೆಚ್ಚಿನ ಪರಿಹಾರ ಸಾಮಗ್ರಿಗಳನ್ನು ಸಾಗಿಸಿವೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು, ಗರ್ಭಿಣಿಯರು, ವಿದೇಶಿ ಪ್ರಜೆಗಳು ಸೇರಿದಂತೆ 65 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಕಚೇರಿಯು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಭಾರತೀಯ ರಕ್ಷಣಾ ತಂಡಗಳು ಅನೇಕ ಕಡೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಸಿಬ್ಬಂದಿಯು ಬದುಲ್ಲಾ ಪ್ರದೇಶದಲ್ಲಿ ಆಳವಾದ ಮಣ್ಣಿನಡಿ ಸಿಲುಕಿದ್ದ ಶವವನ್ನು ಕ್ಲಿಷ್ಟಕರ ಕಾರ್ಯಾಚರಣೆ ನಡೆಸುವ ಮೂಲಕ ಹೊರತೆಗೆದಿದ್ದಾರೆ.
ಕೊಲಂಬೊ ಬಳಿಯ ಸೆಡವಟ್ಟ ಮತ್ತು ನಾದೀಗಮ್ ಪ್ರದೇಶದಲ್ಲಿ ಎನ್‌ಡಿಆರ್‌ಎಫ್ ತಂಡವು 43 ಮಂದಿಯನ್ನು ರಕ್ಷಿಸಿದೆ. 8ರಿಂದ 10 ಅಡಿ ಎತ್ತರದವರೆಗೆ ಹರಿಯುತ್ತಿರುವ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ.
ನ.16ರಿಂದ ದ್ವೀಪ ರಾಷ್ಟ್ರದಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಹಾಗೂ ಭೂಕುಸಿತ ಉಂಟಾಗಿತ್ತು. ಈ ದುರಂತದಲ್ಲಿ ಮಂಗಳವಾರದ ವೇಳೆಗೆ 465 ಮಂದಿ ಮೃತಪಟ್ಟಿದ್ದು, 366 ಮಂದಿ ನಾಪತ್ತೆಯಾಗಿದ್ದಾರೆ.
₹63 ಸಾವಿರ ಕೋಟಿ ನಷ್ಟ
ಚಂಡಮಾರುತದಿಂದಾಗಿ ಶ್ರೀಲಂಕಾಕ್ಕೆ 700 ಕೋಟಿ ಡಾಲರ್‌ನಷ್ಟು (ಅಂದಾಜು ₹63 ಸಾವಿರ ಕೋಟಿ) ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ದೇಶದ ಜಿಡಿಪಿಯ ಶೇ 3–5ರಷ್ಟಾಗಲಿದೆ. ಪ್ರವಾಹ ಹಾಗೂ ಭೂಕುಸಿತದಿಂದ 25 ಜಿಲ್ಲೆಗಳು ಬಾಧಿತವಾಗಿದ್ದು 14 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೆ ಸಿಲುಕಿದ್ದಾರೆ. 2.33 ಲಕ್ಷಕ್ಕೂ ಹೆಚ್ಚು ಜನರು 1441 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತುರ್ತು ಸೇವೆಗಳ ಆಯುಕ್ತ ಪ್ರಭಾತ್ ಚಂದ್ರಕೀರ್ತಿ ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ ಮಂಗಳವಾರದ ವೇಳೆಗೆ 783 ಮನೆಗಳು ನಾಶವಾಗಿವೆ. 31417 ಮನೆಗಳು ಭಾಗಶಃ ಹಾನಿಗೊಂಡಿವೆ. 4 ಸಾವಿರಕ್ಕೂ ಹೆಚ್ಚು ಮೊಬೈಲ್ ಟವರ್‌ಗಳಿಗೆ ಹಾನಿಯಾಗಿದ್ದು ಅವುಗಳಲ್ಲಿ 2800 ಟವರ್‌ಗಳನ್ನು ಪುನರ್‌ಸ್ಥಾಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.