ADVERTISEMENT

ಭಾರತೀಯ ಅಮೆರಿಕದ ವೈದ್ಯರ ಹಣ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 0:28 IST
Last Updated 28 ಮಾರ್ಚ್ 2020, 0:28 IST

ವಾಷಿಂಗ್ಟನ್‌ (ಪಿಟಿಐ): ಆರೋಗ್ಯ ಸೇವೆ ಒದಗಿಸುವವರಿಗೆ ಅಗತ್ಯವಿರುವವರಿಗೆ ಮಾಸ್ಕ್‌ ಮತ್ತು ಸುರಕ್ಷಾ ಕವಚದ ಕಿಟ್‌ಗಳ ನೆರವು ನೀಡಲು ಭಾರತ ಮೂಲದ ಅಮೆರಿಕದ ವೈದ್ಯರನ್ನು ಪ್ರತಿನಿಧಿಸುವ ಪ್ರತಿಷ್ಠಿತ ಸಂಘಟನೆಯೊಂದು ಹಣ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದೆ.

ಕೊರೊನಾ ಸೋಂಕು ನಿಯಂತ್ರಣದ ಹೋರಾಟದಲ್ಲಿ ಈ ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಾಗಿರುವುದರಿಂದ ಸಂಘಟನೆ ಈ ಕ್ರಮಕ್ಕೆ ಮುಂದಾಗಿದೆ.ಈ ವಸ್ತುಗಳ ಅಗತ್ಯವಿರುವ ಆಸ್ಪತ್ರೆಗಳನ್ನು ಗುರುತಿಸಿ ವಿತರಿಸಲು ಕಾರ್ಯಪಡೆ ರಚಿಸಲಾಗಿದೆ.

‘ಕೊರೊನಾ ಸುರಕ್ಷಾ ಕವಚಗಳನ್ನು ಚೀನಾದಲ್ಲಿಯೇ ಹೆಚ್ಚಾಗಿ ತಯಾರಿಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಉತ್ಪಾದನೆ ಮತ್ತು ವಿತರಣೆ ವಿಳಂಬವಾಗುತ್ತಿರುವುದರಿಂದ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ವಸ್ತುಗಳ ಕೊರತೆ ಎದುರಾಗಿದೆ’ಎಂದು ಭಾರತ ಮೂಲದ ಅಮೆರಿಕದ ವೈದ್ಯರ ಒಕ್ಕೂಟ (ಎಎಪಿಐ) ತಿಳಿಸಿದೆ.

ADVERTISEMENT

‘ಸದ್ಯದ ಪರಿಸ್ಥಿತಿಯನ್ನು ಎದುರಿಸಲು ನಾವು ಶಕ್ತರಾಗಿಲ್ಲ. ಅಲ್ಲದೆ, ಹಲವು ಅಗತ್ಯ ಸಲಕರಣೆಗಳ ಕೊರತೆ ಎದುರಿಸುತ್ತಿದ್ದೇವೆ. ಹಾಗಾಗಿ, ವೈದ್ಯರು ಮಾರಕ ವೈರಸ್‌ ಸೋಂಕಿಗೆ ಬಲಿಯಾಗುತ್ತಿದ್ದಾರೆ’ ಎಂದು ಎಎಪಿಐ ಅಧ್ಯಕ್ಷ ಸುರೇಶ್‌ ರೆಡ್ಡಿ ತಿಳಿಸಿದ್ದಾರೆ.

‘ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ನಮ್ಮಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಮುಂದಿನ ನಾಲ್ಕು ವಾರಗಳಲ್ಲಿ, ಈ ವೈರಸ್‌ ಸೋಂಕಿನಿಂದಾಗಿ ಅಮೆರಿಕದಲ್ಲಿ ಹಲವು ಜನರು ಸಾವನ್ನಪ್ಪಲಿದ್ದಾರೆ. 20 ವರ್ಷದ ಯುವಕರು ಸೋಂಕಿನಿಂದ ಮೃತರಾಗುತ್ತಿದ್ದಾರೆ.ಇದು ಈ ರಾಕ್ಷಸ ವೈರಸ್ ವಿರುದ್ಧದ ಜಾಗತಿಕ ಯುದ್ಧವಾಗಿದೆ’ ಎಂದು ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.