ADVERTISEMENT

ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ಭಾರತೀಯ ಮಹಿಳೆ ಆಯ್ಕೆ

ಪಿಟಿಐ
Published 7 ನವೆಂಬರ್ 2020, 6:54 IST
Last Updated 7 ನವೆಂಬರ್ 2020, 6:54 IST
ವಿದಿಶಾ ಮೈತ್ರಾ
ವಿದಿಶಾ ಮೈತ್ರಾ   

ವಿಶ್ವಸಂಸ್ಥೆ: ಭಾರತದ ರಾಜತಾಂತ್ರಿಕ ಅಧಿಕಾರಿ ವಿದಿಶಾ ಮೈತ್ರಾ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗಸಂಸ್ಥೆಯಾದ ಆಡಳಿತಾತ್ಮಕ ಹಾಗೂ ಹಣಕಾಸು ಪ್ರಶ್ನೆಗಳ ಸಲಹಾ ಸಮಿತಿಗೆ (ಎಸಿಎಬಿಒ) ಆಯ್ಕೆಯಾಗಿದ್ದಾರೆ.

ಏಷ್ಯಾ ಪೆಸಿಫಿಕ್‌ ಭಾಗದಿಂದ ಈ ಸಲಹಾ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಪ್ರಜೆ ಮೈತ್ರಾ ಆಗಿದ್ದು, ಅವರು 126 ಮತಗಳನ್ನು ಪಡೆದಿದ್ದಾರೆ.

193 ಸದಸ್ಯರನ್ನೊಳಗೊಂಡ ಸಾಮಾನ್ಯ ಸಭೆಯು ಸಲಹಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡುತ್ತದೆ. ಭೌಗೋಳಿಕ ಪ್ರಾತಿನಿಧ್ಯ, ವೈಯಕ್ತಿಕ ಅರ್ಹತೆ ಹಾಗೂ ಅನುಭವಗಳನ್ನು ಪರಿಗಣಿಸಿ ಈ ನೇಮಕಾತಿ ನಡೆಯುತ್ತದೆ.

ADVERTISEMENT

ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳಿಂದ ಇಬ್ಬರು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಾಗಿತ್ತು. ಮತ್ತೊಬ್ಬ ಅಭ್ಯರ್ಥಿ ಇರಾಕ್‌ನ ಆಲಿ ಮೊಹಮ್ಮದ್‌ ಫೇಕ್‌ ಆಲ್‌ ದಬಾಕ್‌ ಅವರು 64 ಮತಗಳನ್ನು ಪಡೆದರು.

ಸಾಮಾನ್ಯ ಸಭೆಯ ಐದನೇ ಸಮಿತಿಯು ಆಡಳಿತಾತ್ಮಕ ಹಾಗೂ ಹಣಕಾಸು ಕುರಿತಾದ ಪ್ರಶ್ನೆ, ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಇದರ ಸದಸ್ಯರಾಗಿ ಆಯ್ಕೆಯಾಗಿರುವ ಮೈತ್ರಾ ಅವರ ಅವಧಿ ಮೂರೂವರೆ ವರ್ಷಗಳಾಗಿದ್ದು, 2021 ಜನವರಿ 1ರಂದು ಆರಂಭವಾಗಲಿದೆ.

ಭಾರತವು ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ ಸದಸ್ಯ ದೇಶವಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಬೆನ್ನಲ್ಲೇ ಮೈತ್ರಾ ಅವರು ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ನೇಮಕವಾಗಿದ್ದಾರೆ.

ಎಸಿಎಬಿಒ ಸಮಿತಿಯು 16 ಸದಸ್ಯರನ್ನೊಳಗೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.