ADVERTISEMENT

ಗಗನಸಖಿಗೆ ಕಿರುಕುಳ: ಭಾರತೀಯ ವ್ಯಕ್ತಿಗೆ 4 ತಿಂಗಳ ಜೈಲುಶಿಕ್ಷೆ

ಪಿಟಿಐ
Published 27 ಸೆಪ್ಟೆಂಬರ್ 2019, 19:17 IST
Last Updated 27 ಸೆಪ್ಟೆಂಬರ್ 2019, 19:17 IST

ಸಿಂಗಪುರ: ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಭಾರತೀಯ ಮೂಲದ ವ್ಯಕ್ತಿಗೆ ಸಿಂಗಪುರ ನ್ಯಾಯಾಲಯ ನಾಲ್ಕು ತಿಂಗಳ ಜೈಲುಶಿಕ್ಷೆ ವಿಧಿಸಿದೆ.

‘2017ರ ನವೆಂಬರ್ 2ರಂದು ಕೊಚ್ಚಿಯಿಂದ ಸಿಂಗಪುರಕ್ಕೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಗಗನಸಖಿಯೊಬ್ಬರಿಗೆ, ಸಿಂಗಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ಎಂಜಿನಿಯರ್ ವಿಜಯನ್ ಮಂಥನ್ ಗೋಪಾಲ್ ಎನ್ನುವವರು ಲೈಂಗಿಕ ಕಿರುಕುಳ ನೀಡಿದ್ದರು’ಎಂದು ನ್ಯೂಸ್ ಏಷ್ಯಾ ಚಾನೆಲ್‌ ವರದಿ ಮಾಡಿದೆ.

ಘಟನೆಯ ವಿವರ: ಪ್ರಯಾಣಿಕ ವಿಜಯನ್ ವಿಮಾನದಲ್ಲಿನ ಕರೆಗಂಟೆಯ (ಕಾಲ್‌ಲೈಟ್) ಬಟನ್ ಅನ್ನು ಪದೇಪದೇ ಒತ್ತುತ್ತಿದ್ದರು. ನಿರಂತರವಾಗಿ ಬಟನ್ ಒತ್ತಬೇಡಿ ಎಂದು ಹೇಳಲು ಬಂದಿದ್ದ 22ರ ಹರೆಯದ ಗಗನಸಖಿಯ ಮುಖಕ್ಕೆ ಹೊಡೆದಿದ್ದ ವಿಜಯನ್, ನಂತರ ತಮ್ಮ ಕೈಗಳಲ್ಲಿ ಆಕೆಯ ಮುಖ ಹಿಡಿದು, ‘ನೀವು ತುಂಬಾ ಸುಂದರವಾಗಿದ್ದೀರಿ’ಎಂದು ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಗಗನಸಖಿ, ವಿಜಯನ್ ಅವರ ಕೈಗಳಿಂದ ಬಿಡಿಸಿಕೊಳ್ಳಲು ತುಂಬಾ ಒದ್ದಾಡಿದ್ದರು.

ADVERTISEMENT

ಆತನನ್ನು ವಿಮಾನದಿಂದ ಹೊರನೂಕುವಷ್ಟು ಕೋಪ ಬಂದಿದ್ದರೂ ಆತ ತಮ್ಮ ವಿಮಾನದ ಪ್ರಯಾಣಿಕ ಅನ್ನುವ ಒಂದೇ ಕಾರಣಕ್ಕಾಗಿ ಗಗನಸಖಿ ತಾಳ್ಮೆಯಿಂದ ವರ್ತಿಸಿದ್ದರು. ಆದರೂ, ತಪ್ಪು ತಿದ್ದಿಕೊಳ್ಳದ ವಿಜಯನ್, ‘ನಿಮ್ಮ ಕೋಪವನ್ನು ನನ್ನ ಮುಂದೆ ಪ್ರದರ್ಶಿಸಬೇಡಿ, ನಾನು ಈ ವಿಮಾನದ ಮಾಲೀಕ’ಎಂದು ಜೋರು ದನಿಯಲ್ಲಿ ಹೇಳಿ, ಗಗನಸಖಿಯನ್ನು ಬಲವಾಗಿ ಹಿಡಿದುಕೊಂಡು ಆಕೆಯ ಹಿಂಭಾಗವನ್ನು ಮುಟ್ಟಿದ್ದರು.

ವಿಜಯನ್ ಅವರಿಂದ ಬಿಡಿಸಿಕೊಂಡು, ವಿಮಾನದ ಕ್ಯಾಪ್ಟನ್ ಇದ್ದ ಸ್ಥಳಕ್ಕೆ ಧಾವಿಸಿದ್ದ ಗಗನಸಖಿಗೆ ತಮಗಾದ ಕಿರುಕುಳವನ್ನು ವಿವರಿಸಿ, ಈ ಸಂಬಂಧ ವಿಮಾನನಿಲ್ದಾಣದ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಸಿಂಗಪುರ ಜಿಲ್ಲಾ ನ್ಯಾಯಾಧೀಶರಾದ ಸಲಿನಾ ಇಷಾಕ್ ಅವರು, ‘ಸಂತ್ರಸ್ತ ಗಗನಸಖಿ ಆ ಸಮಯದಲ್ಲಿ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿದ್ದರು. 96 ಪ್ರಯಾಣಿಕರನ್ನು ನಿಗಾವಹಿಸುವ ಜವಾಬ್ದಾರಿ ಅವರದ್ದಾಗಿತ್ತು. ಪದೇಪದೇ ಕಾಲಿಂಗ್ ಬಟನ್ ಒತ್ತುತ್ತಿದ್ದ ವಿಜಯನ್ ಅವರಿಗೆ ತಿಳಿಹೇಳಲು ಗಗನಸಖಿ ಪ್ರಯತ್ನಿಸಿದ್ದರು. ಅಲ್ಲದೇ ವಿಮಾನಯಾನ ಪ್ರಯಾಣವು ಅತ್ಯಂತ ಒತ್ತಡದ ಪರಿಸರದಲ್ಲಿ ಪ್ರಯಾಣಿಸುವ ಸ್ಥಿತಿಯಾಗಿದ್ದು, ಇಂಥ ಸಮಯದಲ್ಲಿ ಸಂತ್ರಸ್ತೆ ಮಾನಸಿಕವಾಗಿ, ದೈಹಿಕವಾಗಿ ಎರಡೂ ರೀತಿಯಲ್ಲಿ ಕಿರುಕುಳ ಅನುಭವಿಸಿದ್ದಾರೆ. ಆದರೆ, ಆಕೆಯ ಮಾನಸಿಕ ಕಿರುಕುಳಕ್ಕೆ ಇಲ್ಲಿ ಸಾಕ್ಷ್ಯಾಧಾರಗಳಿಲ್ಲ’ ಎಂದು ವಿಶ್ಲೇಷಿಸಿದ್ದಾರೆ.

ಆರೋಪಿ ವಿಜಯನ್, ಸಂತ್ರಸ್ತೆ ಮತ್ತು ವಿಮಾನದ ಸಿಬ್ಬಂದಿ ಗುಣಮಟ್ಟದ ಸೇವೆ ಒದಗಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ಆರೋಪಿ ಕೋರ್ಟ್ ಕಲಾಪಗಳಿಗೆ ನಿಯಮಿತವಾಗಿ ಹಾಜರಾಗಿದ್ದು, ಪೊಲೀಸರಿಗೂ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಹೇಳಿರುವ ಕೋರ್ಟ್‌, ಆತನಿಗೆ ನಾಲ್ಕು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.