ಜೈಲು (ಪ್ರಾತಿನಿಧಿಕ ಚಿತ್ರ)
ಸಿಂಗಪುರ: 11 ವರ್ಷದ ಬಾಲಕಿ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧದಡಿ ಭಾರತ ಮೂಲದ ವ್ಯಕ್ತಿಗೆ ಸಿಂಗಪುರದಲ್ಲಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಿಂಗಪುರ ಹೈಕೋರ್ಟ್ ಈ ತೀರ್ಪನ್ನು ನೀಡಿದ್ದು, 58 ವರ್ಷದ ರಾಮಲಿಂಗಂ ಸೆಲ್ವಶೇಖರನ್ ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದಾರೆ.
ಅತ್ಯಾಚಾರ ಮತ್ತು ಮಹಿಳೆಯ ಘನತೆಗೆ ಧಕ್ಕೆ ಕುರಿತಾದ ಅವರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಜುಲೈ 7ರಂದು ಹೈಕೋರ್ಟ್ ಹೇಳಿತ್ತು.
ಜುಲೈ 30ರಂದು ನಡೆದ ಶಿಕ್ಷೆ ಘೋಷಣೆ ಕುರಿತಾದ ವಾದದ ವೇಳೆ ರಾಮಲಿಂಗಂ ನಾವು ನಿರ್ದೋಷಿ ಎಂದು ವಾದಿಸಿದ್ದು, ಉನ್ನತ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಶಿಕ್ಷೆ ಘೋಷಣೆ ಬೆನ್ನಲ್ಲೇ ರಾಮಲಿಂಗಂಗೆ 80,000 ಸಿಂಗಪುರ ಡಾಲರ್ ಬಾಂಡ್ ಮೇರೆಗೆ ಜಾಮೀನು ನೀಡಲಾಗಿದೆ. ಆದರೆ, ಜಾಮೀನು ಷರತ್ತುಗಳ ವಿನಾಯಿತಿಗೆ ನ್ಯಾಯಾಧೀಶರು ನಿರಾಕರಿಸಿದ್ದಾರೆ.
ಜಾಮೀನು ಪಡೆದ ಅಪರಾಧಿಯ ಚಲನವಲನ ಗುರುತಿಸಲು ಕಾಲಿಗೆ ಹಾಕುವ ಎಲೆಕ್ಟ್ರಾನಿಕ್ ಟ್ಯಾಗ್‌ನಿಂದ ವಿನಾಯಿತಿ ನೀಡಲು ನ್ಯಾಯಾಧೀಶರು ನಿರಾಕರಿಸಿದ್ಧಾರೆ. ಅಲ್ಲದೆ, ನಿಯಮಿತವಾಗಿ ಪೊಲೀಸ್ ಕಂಟೋನ್ಮೆಂಟ್ ಕಾಂಪ್ಲೆಕ್ಸ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.