ADVERTISEMENT

ಅಮೆರಿಕ: ಬಾಹ್ಯಾಕಾಶದತ್ತ ಹಾರಲಿರುವ ಸಿರಿಶಾ ಬಾಂದ್ಲಾ

ಪಿಟಿಐ
Published 10 ಜುಲೈ 2021, 10:29 IST
Last Updated 10 ಜುಲೈ 2021, 10:29 IST
ಶಿರಿಶಾ ಬಾಂದ್ಲಾ ಚಿತ್ರ: ಶಿರಿಶಾ ಟ್ವಿಟರ್ ಚಿತ್ರ
ಶಿರಿಶಾ ಬಾಂದ್ಲಾ ಚಿತ್ರ: ಶಿರಿಶಾ ಟ್ವಿಟರ್ ಚಿತ್ರ   

ಹೂಸ್ಟನ್‌: ಭಾರತದ ಮೂಲದ ಏರೋನಾಟಿಕಲ್ ಎಂಜಿನಿಯರ್‌ 34ರ ಹರೆಯದ ಸಿರಿಶಾ ಬಾಂದ್ಲಾ ಭಾನುವಾರ ವರ್ಜಿನ್ ಗ್ಯಾಲಕ್ಟಿಕ್‌ ಗಗನ ನೌಕೆಯೊಂದಿಗೆ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.

ವರ್ಜಿನ್ ಗ್ಯಾಲಕ್ಟಿಕ್‌ನ 'ವಿಎಸ್‌ಎಸ್ ಯೂನಿಟಿ' ಗಗನ ನೌಕೆಯಲ್ಲಿ ಪ್ರಯಾಣಿಸಲಿರುವ ಆರು ಗಗನಯಾತ್ರಿಗಳಲ್ಲಿ ಇಬ್ಬರು ಮಹಿಳೆಯರಿದ್ದು, ಅದರಲ್ಲಿ ಸಿರಿಶಾ ಕೂಡ ಒಬ್ಬರು. ಜುಲೈ 11ರಂದು ನ್ಯೂ ಮೆಕ್ಸಿಕೋದಿಂದ ಈ ಗಗನನೌಕೆ ಬಾಹ್ಯಾಕಾಶದತ್ತ ಪ್ರಯಾಣ ಆರಂಭಿಸಲಿದೆ.

ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಹ್ಯಾಕಾಶಕ್ಕೆ ಹಾರುತ್ತಿರುವ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ADVERTISEMENT

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಹುಟ್ಟಿದ ಸಿರಿಶಾ ಬಾಂದ್ಲಾ, ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ಸಮೀಪವಿರುವ ಹೂಸ್ಟನ್‌ ನಗರದಲ್ಲೇ ಬಾಲ್ಯ ಕಳೆದರು. ಪ್ರೌಢಶಾಲೆಯಿಂದಲೇ ಅವರು ಗಗನಯಾತ್ರಿಗುವ ಕನಸು ಕಂಡಿದ್ದರು.

ಮುಂದೆ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಏರೊನಾಟಿಕಲ್ ಎಂಜಿನಿಯರಿಂಗ್‌ ಪದವಿ ಪಡೆದು, ಫ್ಲಾರಿಡಾ ವಿಶ್ವವಿದ್ಯಾನಿಲಯದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ನಡೆಸಿದರು. ನಂತರ ಬಾಂದ್ಲಾ ಅವರು, ಅಮೆರಿಕದ ಅತ್ಯಂತ ಶ್ರೀಮಂತ ರಿಚರ್ಡ್‌ ಬಾನ್ಸನ್‌ ಅವರ ವರ್ಜಿನ್‌ ಗ್ಯಾಲಕ್ಟಿಕ್‌ ಕಂಪನಿ ಸೇರಿದರು. ಜನವರಿ 2021 ರಲ್ಲಿ ಆ ಕಂಪನಿಯ ಸರ್ಕಾರಿ ವ್ಯವಹಾರ ಮತ್ತು ಸಂಶೋಧನಾ ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಣೆ ಆರಂಭಿಸಿದರು ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

ಬಾಹ್ಯಾಕಾಶದತ್ತ ಹೊರಟಿರುವ ಸಿರಿಶಾ, ‘ಈ ಯೋಜನೆಯ ಭಾಗವಾಗಿ ಯೂನಿಟಿ 22 ಗಗನ ನೌಕೆಯಲ್ಲಿ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸುತ್ತಿರುವ ಸಿಬ್ಬಂದಿಯೊಂದಿಗೆ ಜತೆಯಾಗುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಎನ್ನಿಸುತ್ತದೆ‘ ಎಂದು ಟ್ವೀಟ್‌ ಮಾಡಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್‌ ಕಂಪನಿಯ ಜಾಲತಾಣದಲ್ಲಿರುವ ಸಿರಿಶಾ ಅವರ ಪರಿಚಯ ಪತ್ರದ ಪ್ರಕಾರ, ಗಗನಯಾತ್ರಿ ಬಾಂದ್ಲಾ ಅವರ ಸಂಖ್ಯೆ 004 ಆಗಿರುತ್ತದೆ. ಅವರದ್ದು ಸಂಶೋಧಕರ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.