ADVERTISEMENT

ಮಮ್ದಾನಿ ನ್ಯೂಯಾರ್ಕ್‌ ಮೇಯರ್‌: ಐತಿಹಾಸಿಕ ಗೆಲುವು ದಾಖಲಿಸಿದ ಭಾರತೀಯ ಸಂಜಾತ

ಪಿಟಿಐ
Published 5 ನವೆಂಬರ್ 2025, 15:46 IST
Last Updated 5 ನವೆಂಬರ್ 2025, 15:46 IST
<div class="paragraphs"><p>ನ್ಯೂಯಾರ್ಕ್‌ನ ನೂತನ ಮೇಯರ್‌ ಆಗಿ ಆಯ್ಕೆಯಾಗಿರುವ ಜೊಹ್ರಾನ್‌ ಮಮ್ದಾನಿ ಅವರು ತಂದೆ ಮುಹಮ್ಮದ್ ಮಮ್ದಾನಿ, ಪತ್ನಿ ರಮಾ ದುವಾಜಿ ಮತ್ತು ತಾಯಿ ಮೀರಾ ನಾಯರ್‌ ಅವರೊಂದಿಗೆ ಮಂಗಳವಾರ ಸಂಭ್ರಮಾಚರಣೆಯಲ್ಲಿ ಭಾಗಿಯಾದರು </p></div>

ನ್ಯೂಯಾರ್ಕ್‌ನ ನೂತನ ಮೇಯರ್‌ ಆಗಿ ಆಯ್ಕೆಯಾಗಿರುವ ಜೊಹ್ರಾನ್‌ ಮಮ್ದಾನಿ ಅವರು ತಂದೆ ಮುಹಮ್ಮದ್ ಮಮ್ದಾನಿ, ಪತ್ನಿ ರಮಾ ದುವಾಜಿ ಮತ್ತು ತಾಯಿ ಮೀರಾ ನಾಯರ್‌ ಅವರೊಂದಿಗೆ ಮಂಗಳವಾರ ಸಂಭ್ರಮಾಚರಣೆಯಲ್ಲಿ ಭಾಗಿಯಾದರು

   

ಎಪಿ ಚಿತ್ರ

ನ್ಯೂಯಾರ್ಕ್‌: ‘ಇಂದು ರಾತ್ರಿ, ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕುತ್ತಿದ್ದೇವೆ...’

ADVERTISEMENT

‘ಹೌದು... ನ್ಯೂಯಾರ್ಕ್‌ ನಗರದ ಮೇಯರ್‌ ಆಗಿ ಆಯ್ಕೆಗೊಂಡು ನಿಮ್ಮ ಮುಂದೆ ಬಂದು ನಿಲ್ಲುವಾಗ, ನನಗೆ ಮೊದಲಿಗೆ ನೆನಪಿಗೆ ಬರುವುದು ಭಾರತದ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಈ ಮಾತು’. 

‘ಒಂದು ಯುಗ ಕೊನೆಗೊಂಡಾಗ, ಆ ರಾಷ್ಟ್ರದ ಆತ್ಮವು ಹೊಸ ಧ್ವನಿ ಪಡೆಯುವಾಗ, ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕುತ್ತಿದ್ದೇವೆ. ಇಂತಹ ಕ್ಷಣಗಳು ಇತಿಹಾಸದಲ್ಲಿ ವಿರಳಾತಿ ವಿರಳ. ಹೌದು, ನನ್ನ ಗೆಲುವು ರಾಜಕೀಯ ಅರಸೊತ್ತಿಗೆಯನ್ನು ಉರುಳಿಸಿದೆ’. 

ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಾರಿತ್ರಿಕ ಗೆಲುವು ಗಳಿಸಿದ ಇಂಡೋ–ಅಮೆರಿಕನ್ ಅಭ್ಯರ್ಥಿ ಜೊಹ್ರಾನ್ ಮಮ್ದಾನಿ ಅವರು, ವಿಜಯೋತ್ಸವ ವೇಳೆ ಆಡಿದ ನುಡಿಗಳಿವು.   

ಮಮ್ದಾನಿ ಅವರು ಜನವರಿ 1ರಂದು ಅಮೆರಿಕದ ಅತಿ ದೊಡ್ಡ ನಗರವಾದ ನ್ಯೂಯಾರ್ಕ್‌ನ ಮೇಯರ್‌ ಪಟ್ಟಕ್ಕೇರುವಾಗ, ಈ ಸ್ಥಾನ ಅಲಂಕರಿಸುತ್ತಿರುವ ಮೊದಲ ಮುಸ್ಲಿಂ, ಮೊದಲ ಭಾರತೀಯ, ಆಫ್ರಿಕಾದಲ್ಲಿ ಜನಿಸಿದ ಮೊದಲ ವ್ಯಕ್ತಿ ಮತ್ತು ಕಳೆದೊಂದು ಶತಮಾನದಲ್ಲಿ ಮೇಯರ್‌ ಹುದ್ದೆಗೇರಿದ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. 

ಮಮ್ದಾನಿ ಗೆಲುವಿನೊಂದಿಗೆ ನ್ಯೂಯಾರ್ಕ್‌ ನಗರ ಮತ್ತು ಅಮೆರಿಕವು ಹೊಸ ರಾಜಕೀಯ ಮತ್ತು ಸೈದ್ಧಾಂತಿಕ ಯುಗಕ್ಕೆ ಮುನ್ನುಡಿ ಬರೆದಿದೆ. ಬಂಡವಾಳಶಾಹಿಯ ವಿರುದ್ಧ ಪ್ರಜಾಪ್ರಭುತ್ವ, ಸಮಾಜವಾದಿಯ ಐತಿಹಾಸಿಕ ಗೆಲುವು, ದೇಶದ ರಾಜಕೀಯ ಸ್ಥಿತ್ಯಂತರಕ್ಕೂ  ಕಾರಣವಾಗಲಿವೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. 

‘ಡೊನಾಲ್ಡ್‌ ಟ್ರಂಪ್‌ ಅವರೇ, ಸ್ವಲ್ಪ ಧ್ವನಿ ಹೆಚ್ಚಿಸಿಕೊಂಡು ಕೇಳಿಸಿಕೊಳ್ಳಿ,  ನ್ಯೂಯಾರ್ಕ್‌ ನಗರವು ಮುಂದೆಯೂ ವಲಸಿಗರ ನಗರವಾಗಿಯೇ ಮುಂದುವರಿಯಲಿದೆ. ಈ ನಗರವನ್ನು ಕಾರ್ಮಿಕರು, ವಲಸಿಗರು ಬೆವರು ಸುರಿಸಿ ಕಟ್ಟಿದ್ದಾರೆ. ಈಗ ಒಬ್ಬ ವಲಸಿಗನಿಗೆ ಈ ನಗರವನ್ನು ಮುನ್ನಡೆಸಲು ಅವಕಾಶ ಲಭಿಸಿದೆ’ ಎಂದಿರುವ ಮಮ್ದಾನಿ, ‘ನಾನೊಬ್ಬ ಮುಸ್ಲಿಂ’ ಎಂಬ ಕಾರಣಕ್ಕೆ  ಕ್ಷಮೆಯಾಚಿಸುವುದನ್ನು ನಿರಾಕರಿಸುತ್ತೇನೆ. ಜತೆಗೆ ನಮ್ಮಲ್ಲಿ(ವಲಸಿಗರು) ಯಾರನ್ನಾದರೂ ಮುಟ್ಟಬೇಕಿದ್ದರೆ, ನೀವು ನಮ್ಮೆಲ್ಲರನ್ನೂ ದಾಟಬೇಕಾಗುತ್ತದೆ’ ಎಂದು  ಟ್ರಂಪ್‌ ಅವರ ವಲಸೆ ನೀತಿಗೂ ಸವಾಲು ಹಾಕಿದ್ದಾರೆ.

ಜೊಹ್ರಾನ್ ಕ್ರಮಿಸಿದ ಹಾದಿ: 

ಕ್ವೀನ್ಸ್‌ನ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಮತ್ತು ಸ್ಟೇಟ್‌ ಅಸೆಂಬ್ಲಿ ಸದಸ್ಯರಾಗಿದ್ದ ಜೊಹ್ರಾನ್ ಅವರು ನ್ಯೂಯಾರ್ಕ್‌ನ ಮೇಯರ್‌ ಹುದ್ದೆಗೇರಿದ ಯಶೋಗಾಥೆ ಹಲವು ತಲೆಮಾರುಗಳಿಗೆ ಸ್ಫೂರ್ತಿ ತುಂಬುವಂಥದ್ದು. 

ಮಮ್ದಾನಿ ಅವರು ಬ್ರಾಂಕ್ಸ್‌ ಹೈಸ್ಕೂಲ್‌ ಆಫ್ ಸೈನ್ಸ್‌ನಲ್ಲಿ ಪ್ರೌಢ ಶಿಕ್ಷಣ ಹಾಗೂ ಬೌಡೊಯಿನ್‌ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಪ್ರೌಢಶಾಲಾ ಹಂತದ ಕ್ರಿಕೆಟ್‌ ತಂಡದಲ್ಲೂ ಅವರು ಪ್ರಮುಖ ಆಟಗಾರರಾಗಿದ್ದರು.

ವಸತಿ ಸಲಹೆಗಾರ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ನ್ಯೂಯಾರ್ಕ್‌ನಲ್ಲಿ ಕಡಿಮೆ ಆದಾಯ ಹೊಂದಿರುವ ವಲಸಿಗರನ್ನು ಮನೆಗಳಿಂದ ಹೊರಹಾಕುವುದನ್ನು ತಡೆಗಟ್ಟಲು ಅಪಾರವಾಗಿ ಶ್ರಮಿಸಿದ್ದರು. ಈ ಕಾರ್ಯಕ್ಕಾಗಿ ವಲಸಿಗರ, ಕಾರ್ಮಿಕರ ವಿಶ್ವಾಸ ಗಳಿಸಿದ್ದ ಅವರು, 2020ರಲ್ಲಿ ಮೊದಲ ಬಾರಿ ನ್ಯೂಯಾರ್ಕ್‌ ಅಸೆಂಬ್ಲಿಗೆ ಆಯ್ಕೆಯಾಗಿದ್ದರು. 

ಜೊಹ್ರಾನ್ ಮಮ್ದಾನಿ ಭಾರತದ ಸಿನಿಮಾ ನಿರ್ಮಾಪಕಿ ಮೀರಾ ನಾಯರ್, ಕೊಲಂಬಿಯಾ ವಿವಿ ಪ್ರಾಧ್ಯಾಪಕ ಮಹಮದ್‌ ಮಮ್ದಾನಿ ಅವರ ಪುತ್ರ. ಮಮ್ದಾನಿ ಜನಿಸಿದ್ದು ಉಗಾಂಡಾದ ಕಂಪಾಲದಲ್ಲಿ. ಅವರಿಗೆ  5 ವರ್ಷವಿದ್ದಾಗ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ಗೆ, ನಂತರ 7 ವರ್ಷ ಇದ್ದಾಗ  ನ್ಯೂಯಾರ್ಕ್‌ಗೆ ಬಂದು ಅವರ ಕುಟುಂಬ  ನೆಲೆಗೊಂಡಿತ್ತು. ಮಮ್ದಾನಿ ಅವರಿಗೆ 2018ರಲ್ಲಿ ಅಮೆರಿಕದ ಪೌರತ್ವ ಲಭಿಸಿತ್ತು. 

ನ್ಯೂಯಾರ್ಕ್‌ ಮೇಯರ್‌ ಚುನಾವಣೆಯ ಪ್ರಾಥಮಿಕ ಹಂತದಿಂದಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಮ್ದಾನಿ ಅವರನ್ನು ವಿರೋಧಿಸಿಕೊಂಡು ಬಂದಿದ್ದರು. ‘ಜೊಹ್ರಾನ್  ಅವರನ್ನು ಮೇಯರ್ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ನ್ಯೂಯಾರ್ಕ್‌ನ ಜನರು ಮರುಳರು. ಅವರೊಬ್ಬ ಕಮ್ಯುನಿಸ್ಟ್. ಅಂಥವರ ಆಯ್ಕೆ ಯಾವತ್ತೂ ಕಟ್ಟ ಕಡೆಯದ್ದಾಗಿರಬೇಕು’ ಎಂದಿದ್ದರು. 

ಆದರೆ, ಡೆಮಾಕ್ರಟಿಕ್ ಪಕ್ಷದಿಂದ ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಪ್ರತಿನಿಧಿಸಲು ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಮಮ್ದಾನಿ ಅವರು ಮಾಜಿ ಗವರ್ನರ್, ಸ್ವತಂತ್ರ ಅಭ್ಯರ್ಥಿ ಆ್ಯಂಡ್ರ್ಯೂ ಕೌಮೊ ಅವರನ್ನು ಸೋಲಿಸಿದ್ದರು. ಈ ವರ್ಷದ ಜೂನ್‌ನಲ್ಲಿ ಅವರನ್ನು ವಿಜಯಶಾಲಿ ಎಂದು ಘೋಷಿಸಲಾಗಿತ್ತು. ಮಮ್ದಾನಿ ವಿರುದ್ಧ ಚುನಾವಣೆಯ ಪ್ರತಿ ಸುತ್ತಿನಲ್ಲೂ  ವಾಗ್ದಾಳಿ ಮುಂದುವರಿಸಿದ್ದ ಟ್ರಂಪ್‌, ಚುನಾವಣೆಯ ಮುನ್ನಾ ದಿನವಷ್ಟೇ ಅವರ ಸ್ಪರ್ಧೆಗೆ ಅನುಮೋದನೆ ನೀಡಿದ್ದರು.

‘ಧೂಮ್ ಮಚಾಲೆ’:  ವಾಕ್ಚಾತುರ್ಯ ಮತ್ತು ಸಾಮಾಜಿಕ ಮಾಧ್ಯಮದ ಮೇಲಿನ ಹಿಡಿತ ಕೂಡ ಮಮ್ದಾನಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ತಮ್ಮ ವಿಜಯೋತ್ಸವ ಭಾಷಣದ ನಂತರ ಅವರು ಜನಪ್ರಿಯ ಟ್ರ್ಯಾಕ್ ‘ಧೂಮ್ ಮಚಾಲೆ’ ಹಾಡನ್ನು ಪ್ಲೇ ಮಾಡುವಂತೆ ಸೂಚಿಸಿದರು.

ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂದು ನ್ಯೂಯಾರ್ಕ್ ನಗರದ ನಿವಾಸಿಗಳು ಬಯಸಿದ್ದರಿಂದ ನಾವು ಚುನಾವಣೆ ಗೆದ್ದಿದ್ದೇವೆ
ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ಚುನಾಯಿತ ಮೇಯರ್‌
ಟ್ರಂಪ್‌ ಮತದಾನದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಮತ್ತು ಮತದಾನದಲ್ಲಿ ರಿ‍ಪಬ್ಲಿಕ್‌ ಪಕ್ಷದ ಅನುಪಸ್ಥಿತಿಯಿಂದಾಗಿ ನಾವು ಸೋತಿದ್ದೇವೆ
ಡೊನಾಲ್ಡ್‌ ಟ್ರಂಪ್‌ ಟ್ರುಥ್‌ ಸೋಷಿಯಲ್‌ನಲ್ಲಿ   

‘ವೆಚ್ಚ ಕಡಿಮೆಗೊಳಿಸಿ ಜೀವನ ಸುಗಮಗೊಳಿಸಿ’ 

ಬೆಲೆ ಏರಿಕೆ ಹಣದುಬ್ಬರ ಹೆಚ್ಚಳ ಉದ್ಯೋಗ ಕಡಿತ ಸೇರಿದಂತೆ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆ ಎದುರಿಸುತ್ತಿರುವ ಅಮೆರಿಕನ್ನರಿಗೆ ವಿಶೇಷವಾಗಿ ನ್ಯೂಯಾರ್ಕ್‌ನ ಜನರಿಗೆ ‘ಕಾರ್ಮಿಕ ವರ್ಗದ ಜೀವನ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಲೆಂದೇ ನ್ಯೂಯಾರ್ಕ್‌ನ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ’ ಎಂಬ ಮಮ್ದಾನಿ ಅವರ  ಭರವಸೆಯ ನುಡಿಗಳು ವಿಶ್ವಾಸ ಮೂಡಿಸಿದ್ದವು. ಸಿಟಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸಾರ್ವಜನಿಕ ಮಕ್ಕಳ ಆಸ್ಪತ್ರೆ ಕಡಿಮೆ ವೆಚ್ಚದ  ಮನೆಗಳು ಸೇರಿದಂತೆ ’ವೆಚ್ಚ ಕಡಿಮೆಗೊಳಿಸಿ ಜೀವನ ಸುಗಮಗೊಳಿಸಿ’ ಎನ್ನುವುದು ಅವರ ಚುನಾವಣಾ ಘೋಷಣೆಯಾಗಿತ್ತು.  ಬಂಡವಾಳಶಾಹಿ ವ್ಯವಸ್ಥೆಗೆ ವಿರುದ್ಧವಾಗಿದ್ದ ಈ ಯುವ ರಾಜಕಾರಣಿಯು ನ್ಯೂಯಾರ್ಕ್‌ನ ಯುವಸಮೂಹ ಹಾಗೂ ಶ್ರಮಿಕ ವರ್ಗದ ಅಪಾರ ಬೆಂಬಲವನ್ನು ಗಳಿಸಿರುವುದು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.

ದಾಖಲೆ ಮತ ಚಲಾವಣೆ

ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ಮಾಜಿ ಗವರ್ನರ್ ಪ್ರಭಾವಿ ರಾಜಕೀಯ ಮುಖಂಡ ಆ್ಯಂಡ್ರ್ಯೂ ಕೌಮೊ ಮತ್ತು ರಿಪಬ್ಲಿಕನ್‌ ಅಭ್ಯರ್ಥಿ ಕರ್ಟಿಸ್‌ ಸ್ಲಿವಾ ಅವರನ್ನು ಮಣಿಸಿದ್ದಾರೆ. ಒಟ್ಟು 948202 ಮತಗಳನ್ನು (ಶೇ 50.6) ಅವರು ಪಡೆದಿದ್ದಾರೆ. ಆ್ಯಂಡ್ರ್ಯೂ ಕೌಮೊ 776547 ಮತಗಳನ್ನು (ಶೇ 41.3) ಹಾಗೂ ಕರ್ಟಿಸ್‌ ಸ್ಲಿವಾ 137030 ಮತಗಳನ್ನು ಪಡೆದಿದ್ದಾರೆ.  ನ್ಯೂಯಾರ್ಕ್‌ ಮೇಯರ್‌ ಚುನಾವಣೆಯಲ್ಲಿ 1969ರ ಬಳಿಕ ಇದೇ ಮೊದಲ ಬಾರಿಗೆ 20 ಲಕ್ಷ ಮತಗಳು ಚಲಾವಣೆಯಾಗಿವೆ. ಮ್ಯಾನ್‌ಹಾಟನ್‌ನಲ್ಲಿ 444439 ಬ್ರಾಂಕ್ಸ್‌ನಲ್ಲಿ 571857 ಕ್ವೀನ್ಸ್‌ನಲ್ಲಿ 421176 ಹಾಗೂ ಸ್ಟೇಟನ್‌ ಐಸ್‌ಲ್ಯಾಂಡ್‌ನಲ್ಲಿ 123827 ಮತಗಳು ಚಲಾವಣೆಗೊಂಡಿವೆ ಎಂದು ನ್ಯೂಯಾರ್ಕ್‌ನ ಚುನಾವಣಾ ಮಂಡಳಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.