ADVERTISEMENT

12 ಭ್ರಷ್ಟಾಚಾರ ವಿರೋಧಿ ಚಾಂಪಿಯನ್‌ಗಳಲ್ಲಿ ಭಾರತದ ಅಂಜಲಿ ಭಾರದ್ವಾಜ್: ಅಮೆರಿಕ

ಪಿಟಿಐ
Published 24 ಫೆಬ್ರುವರಿ 2021, 6:24 IST
Last Updated 24 ಫೆಬ್ರುವರಿ 2021, 6:24 IST
ಅಂಜಲಿ ಭಾರದ್ವಾಜ್: ಟ್ವಿಟ್ಟರ್ ಚಿತ್ರ
ಅಂಜಲಿ ಭಾರದ್ವಾಜ್: ಟ್ವಿಟ್ಟರ್ ಚಿತ್ರ   

ವಾಷಿಂಗ್ಟನ್: ಅಮೆರಿಕದ ಬಿಡೆನ್ ನೇತೃತ್ವದ ಆಡಳಿತವು ಘೋಷಿಸಿದ 12 ಭ್ರಷ್ಟಾಚಾರ ವಿರೋಧಿ ಚಾಂಪಿಯನ್‌ಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ವಿಷಯಗಳ ಕುರಿತಂತೆ ಕೆಲಸ ಮಾಡುತ್ತಿರುವ ಭಾರತೀಯ ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಸಹ ಒಬ್ಬರಾಗಿದ್ದಾರೆ.

"ಭ್ರಷ್ಟಾಚಾರ-ವಿರೋಧಿ ಹೋರಾಟದಲ್ಲಿ ತೊಡಗಿರುವ ಧೈರ್ಯಶಾಲಿ ವ್ಯಕ್ತಿಗಳು ಮತ್ತು ಅಂತರರಾಷ್ಟ್ರೀಯ ಭ್ರಷ್ಟಾಚಾರ-ವಿರೋಧಿ ಮಾನದಂಡಗಳಿಗೆ ತಮ್ಮ ಬದ್ಧತೆಗಳನ್ನು ಪೂರೈಸಲು ಕೆಲಸ ಮಾಡುವ ದೇಶಗಳು ಸೇರಿದಂತೆ ಭ್ರಷ್ಟಚಾರ ವಿರೋಧಿ ಚಟುವಟಿಕೆಗೆ ಬದ್ಧ ಪಾಲುದಾರರೊಂದಿಗೆ ಕೆಲಸ ಮಾಡುವ ಮೂಲಕ ಮಾತ್ರ ನಾವು ಈ ಸಮಸ್ಯೆಗಳನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಬಿಡೆನ್ ಆಡಳಿತವು ಗುರುತಿಸುತ್ತದೆ" ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಮಂಗಳವಾರ ಹೇಳಿದ್ಧಾರೆ.

"ಪಾರದರ್ಶಕತೆಯನ್ನು ರಕ್ಷಿಸಲು, ಭ್ರಷ್ಟಾಚಾರವನ್ನು ಎದುರಿಸಲು ಮತ್ತು ತಮ್ಮದೇ ದೇಶಗಳಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಕೂಲ ಪರಿಸ್ಥಿತಿಯಲ್ಲಿ ದಣಿವರಿಯದೆ ಕೆಲಸ ಮಾಡಿದ ವ್ಯಕ್ತಿಗಳನ್ನು ಗುರುತಿಸಲು ನಾನು ಹೊಸ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಚಾಂಪಿಯನ್ಸ್ ಪ್ರಶಸ್ತಿಯನ್ನು ಘೋಷಿಸುತ್ತಿದ್ದೇನೆ, " ಎಂದು ಅವರು ಹೇಳಿದರು.

ADVERTISEMENT

ಅಮೆರಿಕ ತಿಳಿಸಿರುವ ಮಾಹಿತಿ ಪ್ರಕಾರ, ಅಂಜಲಿ ಭಾರದ್ವಾಜ್ ಎರಡು ದಶಕಗಳಿಂದ ಭಾರತದಲ್ಲಿ ಮಾಹಿತಿ ಹಕ್ಕು ಚಳವಳಿಯ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

48 ವರ್ಷದ ಸಾಮಾಜಿಕ ಕಾರ್ಯಕೆರ್ತೆ ಅಂಜಲಿ ಭಾರದ್ವಾಜ್, ಸರ್ಕಾರದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸಲು ಮತ್ತು ನಾಗರಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿರುವ ನಾಗರಿಕರ ಗುಂಪು ‘ಸಾರ್ಥಕ್ ನಾಗರಿಕ್ಸಂಘಟನ್’ (ಎಸ್‌ಎನ್‌ಎಸ್) ಸ್ಥಾಪಕರಾಗಿದ್ದಾರೆ.

ಆ್ಯಂಟಿ ಕರಪ್ಷನ್ ಒಂಬುಡ್ಸ್‌ಮನ್ ಮತ್ತು ವಿಶಲ್ ಬ್ಲೋವರ್ಸ್ ಪ್ರೊಟೆಕ್ಷನ್ ಆಕ್ಟ್ ಅನ್ನು ರಚಿಸಿ, ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗವನ್ನು ಬಹಿರಂಗಪಡಿಸುವವರಿಗೆ ರಕ್ಷಣೆ ನೀಡುವಂತೆ ಯಶಸ್ವಿಯಾಗಿ ಪ್ರತಿಪಾದಿಸಿದ ಜನರ ಮಾಹಿತಿ ಹಕ್ಕಿನ ರಾಷ್ಟ್ರೀಯ ಅಭಿಯಾನದ ಸಂಚಾಲಕಿಯೂ ಆಗಿದ್ದಾರೆ.

ಈ ಗೌರವವು "ದೇಶಾದ್ಯಂತ ಜನರು ಮತ್ತು ಗುಂಪುಗಳ ಸಾಮೂಹಿಕ ಪ್ರಯತ್ನಕ್ಕೆ ಸಿಕ್ಕ ಮಾನ್ಯತೆ" ಎಂದು ಭಾರದ್ವಾಜ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಅಂಜಲಿ ಭಾರದ್ವಾಜ್ ಜೊತೆಗೆ, ಅಲ್ಬೇನಿಯಾದ ಅರ್ಡಿಯನ್ ದ್ವಾರಾನಿ, ಈಕ್ವೆಡಾರ್‌ನ ಡಯಾನಾ ಸಲಾಜಾರ್, ಮೈಕ್ರೋನೇಷ್ಯಾದ ಸೋಫಿಯಾ ಪ್ರಿಟ್ರಿಕ್, ಗ್ವಾಟೆಮಾಲಾದ ಜುವಾನ್ ಫ್ರಾನ್ಸಿಸ್ಕೊ ಸ್ಯಾಂಡೋವಲ್ ಅಲ್ಫಾರೊ, ಗಿನಿಯಾದ ಇಬ್ರಾಹೀಮಾ ಕಲಿಲ್ ಗುಯೆ, ಇರಾಕ್‌ನ ಧುಹಾ ಎ ಮೊಹಮ್ಮದ್, ಕಿರ್ಜಿಜ್ ರಿಪಬ್ಲಿಕ್‌ನ ಬೊಲೊಟ್ ತೆಮಿರೊವ್, ಲಿಬಿಯಾದ ಮುಸ್ತಫಾ ಅಬ್ದುಲ್ಲಾ ಸನಲ್ಲಾ, ಫಿಲಿಪೈನ್ಸ್‌ನ ವಿಕ್ಟರ್ ಸೊಟ್ಟೊ, ಸಿಯೆರಾ ಲಿಯೋನ್‌ನ ಫ್ರಾನ್ಸಿಸ್ ಬೆನ್ ಕೈಫಾಲಾ ಮತ್ತು ಉಕ್ರೇನ್‌ನ ರುಸ್ಲಾನ್ ರ್ಯಬೊಶಪ್ಕಾ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.