ADVERTISEMENT

ಚುನಾವಣೆಗೆ ಸ್ಪರ್ಧಿಸದಂತೆ ಭಾರತೀಯ ವಿದ್ಯಾರ್ಥಿ ಅನರ್ಹಗೊಳಿಸಿದ ಲಂಡನ್‌ ವಿವಿ

ಹರಿಯಾಣ ಮೂಲದ ಕರಣ್‌ ಕಠಾರಿಯಾ ಆರೋಪ

ಪಿಟಿಐ
Published 4 ಏಪ್ರಿಲ್ 2023, 13:51 IST
Last Updated 4 ಏಪ್ರಿಲ್ 2023, 13:51 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ   

ಲಂಡನ್‌: ‘ಭಾರತೀಯ ಪ್ರಜೆ ಮತ್ತು ಹಿಂದೂ ಆದ ಕಾರಣಕ್ಕೆ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ (ಎಲ್‌ಎಸ್‌ಇ) ಸ್ಟೂಡೆಂಟ್ಸ್‌ ಯೂನಿಯನ್‌ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನನ್ನನ್ನು ಅನರ್ಹಗೊಳಿಸಲಾಗಿದೆ’ ಎಂದು ಭಾರತೀಯ ಮೂಲದ ಕಾನೂನು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.

ಲಂಡನ್‌ನ ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆಯುತ್ತಿರುವ ಹರಿಯಾಣದ ಕರಣ್‌ ಕಠಾರಿಯಾ ಅವರು ಈ ಆರೋಪ ಮಾಡಿದ್ದಾರೆ.

‘ಸ್ಟೂಡೆಂಟ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ನನ್ನ ಗೆಳೆಯರ ಬೆಂಬಲ, ಪ್ರೋತ್ಸಾಹ ಇದೆ. ದುರದೃಷ್ಟಕರ ಸಂಗತಿ ಎಂದರೆ ಭಾರತೀಯ, ಹಿಂದೂ ವಿದ್ಯಾರ್ಥಿಯೊಬ್ಬ ವಿವಿಯ ವಿದ್ಯಾರ್ಥಿ ಸಂಘಟನೆ ಮುನ್ನಡೆಸುವುದನ್ನು ಕೆಲವರು ವೈಯಕ್ತಿಕವಾಗಿ ಸಹಿಸುವುದಿಲ್ಲ. ಹೀಗಾಗಿ ನನ್ನ ವ್ಯಕ್ತಿತ್ವಕ್ಕೆ ಸಾಮಾಜಿಕವಾಗಿ ಕುಂದು ತರಲು ಯತ್ನಿಸಿದ್ದಾರೆ. ವಿವಿಯು ನನ್ನ ಮೇಲೆ ಆಧಾರ ರಹಿತ ಆರೋಪಗಳನ್ನು ಹೊರಿಸಿ, ಚುನಾವಣೆಗೆ ಸ್ಪರ್ಧಿಸದಂತೆ ಕಳೆದ ವಾರ ನನ್ನನ್ನು ಅನರ್ಹಗೊಳಿಸಿದೆ’ ಎಂದು 22 ವರ್ಷದ ಕರಣ್‌ ದೂರಿದ್ದಾರೆ.

ADVERTISEMENT

‘ಸ್ನಾತಕೋತ್ತರ ಪದವಿಗೆ ಇಲ್ಲಿ ಸೇರಿದಾಗ ನನ್ನ ಕನಸು ನನಸಾಗಿಸಿಕೊಂಡು, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಗುರಿ ಹೊಂದಿದ್ದೆ. ಆದರೆ, ಭಾರತೀಯ, ಹಿಂದೂ ಎನ್ನುವ ಕಾರಣಕ್ಕೆ ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ, ಯೋಜಿತ ಆರೋಪದ ಅಭಿಯಾನ ನಡೆಸಲಾಗುತ್ತಿದೆ. ನನ್ನ ಕನಸು ನಿಧಾನವಾಗಿ ಕಮರುತ್ತಿದೆ’ ಎಂದು ಕರಣ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಕರಣ್‌ ಸ್ನಾತಕೋತ್ತರ ಕಾನೂನು ಪದವಿಗಾಗಿ ಕಳೆದ ವರ್ಷ ಬ್ರಿಟನ್‌ಗೆ ಬಂದ ಕೂಡಲೇ ತಮ್ಮ ಸಮೂಹದ ಶೈಕ್ಷಣಿಕ ಪ್ರತಿನಿಧಿಯಾಗಿ ಮತ್ತು ಬ್ರಿಟನ್‌ ನ್ಯಾಷನಲ್ ಯೂನಿಯನ್ ಫಾರ್ ಸ್ಟೂಡೆಂಟ್ಸ್ (ಎನ್‌ಯುಎಸ್‌) ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.