ADVERTISEMENT

‘ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ’

ಯಾವುದೇ ದೇಶದ ಜತೆ ಯುದ್ಧ ಬಯಸುವುದಿಲ್ಲ: ಶಾಂತಿಗೆ ಬದ್ಧವೆಂದ ಇರಾನ್‌

ಏಜೆನ್ಸೀಸ್
Published 26 ಜೂನ್ 2019, 19:45 IST
Last Updated 26 ಜೂನ್ 2019, 19:45 IST
ಹಸನ್‌ ರೌಹಾನಿ
ಹಸನ್‌ ರೌಹಾನಿ   

ಟೆಹರಾನ್‌ (ಎಎಫ್‌ಪಿ/ರಾಯಿಟರ್ಸ್‌): ‘ಅಮೆರಿಕದ ಒತ್ತಡಗಳಿಗೆ ಮತ್ತು ಅವಮಾನಗಳಿಗೆ ಮಣಿಯುವುದಿಲ್ಲ’ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾರುಹೊಲ್ಲಾ ಖೊಮೇನಿ ಕಟುವಾಗಿ ಹೇಳಿದ್ದಾರೆ.

‘ಅಮೆರಿಕ ವಿಧಿಸಿರುವ ಕ್ರೂರ ನಿರ್ಬಂಧಗಳಿಂದ ಇರಾನ್‌ ತನ್ನ ನಿಲುವುಗಳಿಂದ ಹಿಂದೆ ಸರಿಯುವುದಿಲ್ಲ. ಇರಾನ್‌ ತನ್ನ ಘನತೆ ಮತ್ತು ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಬದ್ಧವಾಗಿದೆ. ಹೀಗಾಗಿಯೇ ಕ್ರೂರ ವೈರಿಗಳು ಹೇರುವ ಒತ್ತಡಗಳು ಇರಾನ್‌ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಅಮೆರಿಕಗೆ ತಿರುಗೇಟು ನೀಡಿದ್ದಾರೆ.

‘ಕ್ರೂರ ಮತ್ತು ಹಿಂಸಾತ್ಮಕ ಮನೋಭಾವದ ಆಡಳಿತವು ಸಭ್ಯ ರಾಷ್ಟ್ರವನ್ನು ಅವಮಾನಿಸಿ ದೂಷಿಸುತ್ತಿದೆ. ಯುದ್ಧ ಮತ್ತು ಸಂಘರ್ಷಕ್ಕೆ ಅಮೆರಿಕ ಕುಖ್ಯಾತಿ ಪಡೆದಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಸಂಧಾನದ ಪ್ರಸ್ತಾವ ಮುಂದಿಟ್ಟಿರುವ ಅಮೆರಿಕದ ನಡೆ ವಂಚನೆಯಿಂದ ಕೂಡಿದೆ. ತನಗೆ ಬೇಕಾದ ರೀತಿಯಲ್ಲಿ ಸಂಧಾನ ನಡೆಸುವುದನ್ನು ಅಮೆರಿಕ ಬಯಸುತ್ತಿದೆ. ಅಮೆರಿಕದ ನಾಯಕರು ಒಂದು ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ನಮ್ಮ ಬಳಿ ಬರುತ್ತಿದ್ದಾರೆ. ಇನ್ನೊಂದೆಡೆ ನಮ್ಮ ಶಸ್ತ್ರಾಸ್ತ್ರ ಎಸೆಯುವಂತೆ ಹೇಳುತ್ತಿದ್ದಾರೆ. ಇದು ಯಾವ ರೀತಿಯ ಸಂಧಾನ’ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ವೆಬ್‌ಸೈಟ್‌ನಲ್ಲಿ ಹೇಳಿಕೆಯನ್ನು ಪ್ರಕಟಿಸಲಾಗಿದೆ.ಉಭಯ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಇರಾನ್‌ ಜತೆ ಮಾತುಕತೆ ನಡೆಸಲು ಇಚ್ಛಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದರು.

ಯುದ್ಧ ಬಯಸುವುದಿಲ್ಲ: ‘ಅಮೆರಿಕ ಜತೆ ಎಂದಿಗೂ ಯುದ್ಧ ಬಯಸುವುದಿಲ್ಲ. ಆದರೆ, ಅಮೆರಿಕ ಸರಿಯಾದ ಮಾರ್ಗದಲ್ಲಿ ಸಾಗುತ್ತಿಲ್ಲ’ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಹೇಳಿದ್ದಾರೆ.

‘ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸುವ ಆಸಕ್ತಿ ಇರಾನ್‌ಗೆ ಇಲ್ಲ. ಅಮೆರಿಕ ಸೇರಿದಂತೆ ಯಾವುದೇ ದೇಶದ ಜತೆ ಯುದ್ಧ ಮಾಡಲು ಇಚ್ಛಿಸುವುದಿಲ್ಲ. ಇರಾನ್‌ ಸದಾ ಶಾಂತಿ ಮತ್ತು ಸ್ಥಿರತೆಗೆ ಬದ್ಧವಾಗಿದ್ದು, ಈ ನಿಟ್ಟಿನಲ್ಲೇ ಪ್ರಯತ್ನಗಳನ್ನು ಕೈಗೊಳ್ಳುತ್ತೇವೆ’ ಎಂದು ರೌಹಾನಿ ಬುಧವಾರ ತಿಳಿಸಿದ್ದಾರೆ.

‘ಅಮೆರಿಕದ ನಡವಳಿಕೆಯಿಂದಲೇ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಯಿತು. ಒಪ್ಪಂದಕ್ಕೆ ಅಮೆರಿಕ ಮುಂದಾಗಿದ್ದರೆ ಈ ಪ್ರದೇಶದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿತ್ತು’ ಎಂದು ಹೇಳಿದರು.

‘2015ರ ಪರಮಾಣು ಒಪ್ಪಂದದ ಅನ್ವಯ ಐರೋಪ್ಯ ರಾಷ್ಟ್ರಗಳು ನಡೆದುಕೊಳ್ಳಲಿಲ್ಲ. ಈ ಒಪ್ಪಂದದ ಮೂಲಕ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಲಾಭ ಮಾಡಿಕೊಳ್ಳುವ ಪ್ರಯತ್ನ ನಡೆಯಿತು’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.