ADVERTISEMENT

ದಿಗ್ಬಂಧನ ಸಮಸ್ಯೆಯಲ್ಲ : ಇಸ್ಲಾಮಿಕ್‌ ಗಣರಾಜ್ಯದ ವಿದೇಶಾಂಗ ಸಚಿವಾಲಯ

ಏಜೆನ್ಸೀಸ್
Published 24 ಜೂನ್ 2019, 19:28 IST
Last Updated 24 ಜೂನ್ 2019, 19:28 IST

ಟೆಹರಾನ್‌: ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನದಿಂದ ಇರಾನ್‌ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಇಸ್ಲಾಮಿಕ್‌ ಗಣರಾಜ್ಯದ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ.

‘ಕಳೆದ 40 ವರ್ಷಗಳಲ್ಲಿ ಇರಾನ್‌ ಮೇಲೆ ಹಾಕದೇ ಉಳಿದ ದಿಗ್ಬಂಧನಗಳು ಯಾವುದಿವೆ ಎಂಬುದು ಗೊತ್ತಾಗುತ್ತಿಲ್ಲ. ಇನ್ನು ಯಾವ ಉದ್ದೇಶದಿಂದ ಹೊಸ ದಿಗ್ಬಂಧನಗಳನ್ನು ವಿಧಿಸಿದ್ದಾರೋ ಗೊತ್ತಿಲ್ಲ. ಆದ್ದರಿಂದ ಅವುಗಳ ಪರಿಣಾಮವನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ’ ಎಂದು ಅಬ್ಬಾಸ್‌ ಮೌಸವಿ ಹೇಳಿದರು.

ಗುರುವಾರ ಇರಾನಿ ಸೇನೆಯು ಅಮೆರಿಕದ ಬೇಹುಗಾರಿಕಾ ಡ್ರೋನ್‌ ಅನ್ನು ಹೊಡೆದುರುಳಿಸಿದ ಮೇಲೆ ವಾಷಿಂಗ್ಟನ್‌ ಮತ್ತು ಟೆಹರಾನ್‌ ನಡುವೆ ಪರಿಸ್ಥಿತಿ ಬಿಗುಗೊಂಡಿದೆ.

ADVERTISEMENT

ಇರಾನ್‌ನ ಅಣುಶಕ್ತಿಯ ಚಟುವಟಿಕೆಗೆ ಹಿನ್ನಡೆ ಉಂಟು ಮಾಡುವ ಉದ್ದೇಶದಿಂದ ಕಳೆದ ವರ್ಷ ಟ್ರಂಪ್‌ 2015ರ ಅಣು ಒಪ್ಪಂದದಿಂದ ಏಕಪಕ್ಷೀಯವಾಗಿ ಹೊರಬಂದಿದ್ದರು. ಇರಾನ್‌ನ ತೈಲ ಮಾರಾಟ ವ್ಯವಸ್ಥೆಗೆ ಕಡಿವಾಣ ಹಾಕುವ ಮೂಲಕ ಇರಾನ್‌ನ ಆರ್ಥಿಕತೆಯನ್ನು ಕುಗ್ಗಿಸುವ ಪ್ರಯತ್ನ ಅವರದಾಗಿತ್ತು. ಇದೀಗ ಈ ಪ್ರಯತ್ನವನ್ನು ವಿಸ್ತರಿಸಲು ಉದ್ದೇಶಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಇರಾನ್‌ ವಿರುದ್ಧ ತೀವ್ರ ಒತ್ತಡ ಹೇರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವ ಟ್ರಂಪ್‌, ಇಸ್ಲಾಮಿಕ್‌ ಗಣರಾಜ್ಯದ ಜೊತೆಗೆ ಷರತ್ತುರಹಿತವಾಗಿ ಮಾತುಕತೆ ನಡೆಸಲು ಅಮೆರಿಕ ಸಿದ್ಧವಿದೆ ಎಂದು ಹೇಳಿದ್ದಾರೆ.

‘ಒಂದೆಡೆ ಬೆದರಿಕೆಗಳನ್ನು ಒಡ್ಡುತ್ತ, ದಿಗ್ಬಂಧನಗಳನ್ನು ಹಾಕುವುದಾಗಿ ಹೇಳುತ್ತ ಇರುವ ಅಮೆರಿಕ ಷರತ್ತುರಹಿತವಾಗಿ ಮಾತುಕತೆ ನಡೆಸುವ ಪ್ರಸ್ತಾಪ ಇಡುತ್ತಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಇರಾನ್‌ ಅಧ್ಯಕ್ಷರ ಸಲಹೆಗಾರ ಹೆಸಮೊದಿನ್‌ ಅಶ್ನಾ ಸೋಮವಾರ ಟ್ವೀಟ್‌ ಮಾಡಿದ್ದರು.

ಯುದ್ಧ ಮತ್ತು ದಿಗ್ಬಂಧನಗಳನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ಪರಿಗಣಿಸುತ್ತೇವೆ ಎಂದು ವಿವರಿಸಿದ್ದಾರೆ.

ಇರಾನ್‌ ಮೇಲೆ ದಿಗ್ಬಂಧನ ವಿಧಿಸಿರುವ ಅಮೆರಿಕದ ನಡೆ ಕಾನೂನು ಬಾಹಿರವಾದುದು ಎಂದು ರಷ್ಯಾ ಖಂಡಿಸಿದೆ.

‘ಸೈಬರ್‌ ದಾಳಿ ಯಶಸ್ವಿಯಾಗಿಲ್ಲ’

ಇಸ್ಲಾಮಿಕ್‌ ಗಣರಾಜ್ಯದ ವಿರುದ್ಧ ಅಮೆರಿಕ ಯಾವುದೇ ಸೈಬರ್‌ದಾಳಿ ನಡೆಸುವಲ್ಲಿ ಯಶಸ್ವಿಯಾಗಿಲ್ಲ ಎಂದು ಸೋಮವಾರ ಇರಾನ್‌
ಸ್ಪಷ್ಟಪಡಿಸಿದೆ.

ಇರಾನ್‌ ಮೇಲೆ ಸೈಬರ್‌ ದಾಳಿ ನಡೆದಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿವೆ. ದಾಳಿ ನಡೆಸಲು ಅಮೆರಿಕ ಪ್ರಯತ್ನಿಸಿದ್ದರೂ ಅದು ಯಶಸ್ವಿಯಾಗಿಲ್ಲ ಎಂದು ದೂರ ಸಂಪರ್ಕ ಸಚಿವ ಮೊಹಮ್ಮದ್‌ ಜಾವೇದ್‌ ಅಜರಾರಿ ಜಹ್ರೋಮಿ ಟ್ವಿಟ್ಟರ್‌ನಲ್ಲಿ ವಿವರಿಸಿದ್ದಾರೆ.

ಅಮೆರಿಕದ ಬೇಹುಗಾರಿಕಾ ಕ್ಷಿಪಣಿಯನ್ನು ಟೆಹರಾನ್‌ ಹೊಡೆದುರುಳಿಸಿದ ಬಳಿಕ, ಅಮೆರಿಕವುಇರಾನ್‌ನ ಗೂಢಚರ ಜಾಲ ಮತ್ತು ಕ್ಷಿಪಣಿ ನಿಯಂತ್ರಣ ವ್ಯವಸ್ಥೆಯ ಮೇಲೆ ಸೈಬರ್‌ ದಾಳಿ ನಡೆಸಿದ್ದಾಗಿ ಅಮೆರಿಕದ ಮಾಧ್ಯಮಗಳು ಶನಿವಾರ ವರದಿ ಮಾಡಿದ್ದವು.

ಸೈಬರ್‌ ದಾಳಿ ಮೂಲಕ ರಾಕೆಟ್‌ ಮತ್ತು ಕ್ಷಿಪಣಿಗಳನ್ನು ನಿಯಂತ್ರಿಸುವ ಕಂಪ್ಯೂಟರ್‌ಗಳನ್ನು ಹಾಳುಗೆಡವಲಾಗಿದೆ. ಆದರೆ ಯಾವುದೇ ಆಸ್ತಿಪಾಸ್ತಿ ನಷ್ಟವಾಗಿಲ್ಲ ಎಂದು ಮಾಧ್ಯಮ ವರದಿ ಹೇಳಿತ್ತು.

‘ಸ್ಟುಕ್ಸ್‌ನೆಟ್‌’ ಮತ್ತು ‘ಯುನಿಲಾಟರಲಿಸಮ್‌’ ವೈರಸ್‌ಗಳ ಮೂಲಕ ಇರಾನ್‌ ಸೈಬರ್‌ ದಾಳಿಯ ಬೆದರಿಕೆ ಎದುರಿಸುತ್ತಿದೆ ಎಂಬುದನ್ನು ಜಹ್ರೋಮಿ ಒಪ್ಪಿಕೊಂಡಿದ್ದಾರೆ. ಸ್ಟುಕ್ಸ್‌ನೆಟ್‌ ಎಂಬುದು ಇರಾನ್‌ ಅಣು ವ್ಯವಸ್ಥೆಯನ್ನು ಹಾಳುಗೆಡವಲು 2010ರಲ್ಲಿ ಇಸ್ರೇಲ್‌ ಕಂಡುಹಿಡಿದ ವೈರಸ್‌.

ಕಳೆದ ವರ್ಷ ಇರಾನ್‌ ಬರೋಬ್ಬರಿ 33 ದಶಲಕ್ಷ ಸೈಬರ್‌ ದಾಳಿಯನ್ನು ‘ದೇಜ್‌ಫ ಶೀಲ್ಡ್‌’ ಮೂಲಕ ಎದುರಿಸಿ ಸಶಕ್ತವಾಗಿ ನಿಲ್ಲುವುದು ಸಾಧ್ಯವಾಯಿತು ಎಂದು ಜಹ್ರೋಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.