ADVERTISEMENT

ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ: ಇಬ್ಬರು ಮಕ್ಕಳು ಸಾವು

ಏಜೆನ್ಸೀಸ್
Published 17 ಜನವರಿ 2024, 3:13 IST
Last Updated 17 ಜನವರಿ 2024, 3:13 IST
<div class="paragraphs"><p>ಕ್ಷಿಪಣಿ ದಾಳಿ(ಪ್ರಾತಿನಿಧಿಕ ಚಿತ್ರ)</p></div>

ಕ್ಷಿಪಣಿ ದಾಳಿ(ಪ್ರಾತಿನಿಧಿಕ ಚಿತ್ರ)

   

ಇಸ್ಲಾಮಾಬಾದ್‌(ಪಾಕಿಸ್ತಾನ): ಪಾಕಿಸ್ತಾನದ ಜೈಶ್ ಅಲ್ ಅದ್ಲ್‌ ಉಗ್ರಗಾಮಿ ಸಂಘಟನೆಯ ಎರಡು ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ನಡೆಸಿದೆ.

ಇರಾಕ್‌ ಮತ್ತು ಸಿರಿಯಾದ ಮೇಲೆ ಕ್ಷಿಪಣಿ ದಾಳಿ ನಡೆದ ಒಂದೇ ದಿನದಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಯ ನೆಲೆ ಮೇಲೆ ಇರಾನ್‌ ದಾಳಿ ನಡೆಸಿದೆ. ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನ ತಿಳಿಸಿದೆ.

ADVERTISEMENT

‘ಜೈಶ್ ಅಲ್ ಅದ್ಲ್‌‘ ಪಾಕಿಸ್ತಾನದ ಬಲೂಚಿಯಲ್ಲಿ ನೆಲೆಯುರಿರುವ ಒಂದು ಉಗ್ರಗಾಮಿ ಸಂಘಟನೆಯಾಗಿದ್ದು, 2012ರಲ್ಲಿ ಸ್ಠಾಪನೆಗೊಂಡಿತ್ತು. ಜೈಶ್ ಅಲ್ ಅದ್ಲ್‌ ಉಗ್ರಗಾಮಿ ಗುಂಪನ್ನು ಹೆಡೆಮುರಿ ಕಟ್ಟಲು ಇರಾನ್ ಪ್ರಯತ್ನಿಸಿದ್ದು, ಉಗ್ರಗಾಮಿ ಗುಂಪಿನೊಡನೆ ಗಡಿಯಲ್ಲಿ ಯುದ್ಧ ಸಾರಿತ್ತು. ಉಗ್ರ ನೆಲೆಗಳನ್ನು ನಾಶ ಮಾಡಲು ಇರಾನ್‌ಗೆ ಕ್ಷಿಪಣಿ ದಾಳಿ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಮೇಲೆ ನಡೆದ ದಾಳಿಯಲ್ಲಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಐಆರ್‌ಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಈ ಕುರಿತಂತೆ ಪಾಕಿಸ್ತಾನ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ಪೋಷಿಸುತ್ತಿದೆ ಎಂದು ಇರಾನ್‌ ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿತ್ತು.

ಇರಾನ್ ದಾಳಿ ಖಂಡಿಸಿದ ಪಾಕಿಸ್ತಾನ

ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ದಾಳಿ ನಡೆಸಿರುವುದನ್ನು ಪಾಕಿಸ್ತಾನ ಬಲವಾಗಿ ಖಂಡಿಸಿದೆ. ವಾಯುನೆಲೆಯ ನಿಯಮಗಳನ್ನು ಉಲ್ಲಂಘಿಸಿ ಇರಾನ್‌ ದಾಳಿ ನಡೆಸಿದ್ದು, ಇಂತಹ ಕ್ರಮಗಳು ಉಭಯ ದೇಶಗಳ ನಡುವೆ ಗಂಭೀರ ಪರಿಣಾಮ ಉಂಟುಮಾಡಬಹುದು ಎಂದು ಎಚ್ಚರಿಸಿದೆ.

ಇರಾನ್ ರಾಯಭಾರಿಯನ್ನು ಕರೆಸಿಕೊಂಡಿರುವ ಪಾಕ್‌, ಕ್ಷಿಪಣಿ ದಾಳಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಇರಾಕ್, ಸಿರಿಯಾದ ಮೇಲೆ ದಾಳಿ

ತಿಂಗಳ ಆರಂಭದಲ್ಲಿ ಇರಾನ್‌ನಲ್ಲಿ ಎರಡು ಆತ್ಮಾಹುತಿ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಕನಿಷ್ಠ 84 ಜನರು ಮೃತಪಟ್ಟಿದ್ದು, 284 ಜನರು ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ ಹೊತ್ತುಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾದಲ್ಲಿ ಇಸ್ಲಾಮಿಕ್‌ ಸ್ಟೇಟ್ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.