ADVERTISEMENT

ಗೂಢಚರ್ಯೆ: ರಕ್ಷಣಾ ಸಚಿವಾಲಯದ ಮಾಜಿ ಅಧಿಕಾರಿಯನ್ನು ಗಲ್ಲಿಗೇರಿಸಿದ ಇರಾನ್‌

ಏಜೆನ್ಸೀಸ್
Published 14 ಜನವರಿ 2023, 13:56 IST
Last Updated 14 ಜನವರಿ 2023, 13:56 IST
ಅಲಿರೆಜಾ ಅಕ್ಬರಿ
ಅಲಿರೆಜಾ ಅಕ್ಬರಿ   

ದುಬೈ (ಎಪಿ): ‘ಬೇಹುಗಾರಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಲಿರೆಜಾ ಅಕ್ಬರಿ ಎಂಬುವವರನ್ನು ಗಲ್ಲಿಗೇರಿಸಲಾಗಿದೆ. ಇರಾನ್‌ ಮತ್ತು ಬ್ರಿಟನ್‌ನ ಪೌರತ್ವ ಹೊಂದಿದ್ದ ಇವರು ದೇಶದ ರಕ್ಷಣಾ ಸಚಿವಾಲಯದಲ್ಲಿ ಈ ಹಿಂದೆ ಉನ್ನತ ಹುದ್ದೆಯೊಂದನ್ನು ಅಲಂಕರಿಸಿದ್ದರು‍’ ಎಂದು ಇರಾನ್‌ ಸರ್ಕಾರ ಶನಿವಾರ ಹೇಳಿದೆ.

ಅಕ್ಬರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ರದ್ದು‍ಪಡಿಸಬೇಕೆಂದು ವಿವಿಧ ದೇಶಗಳು ಒತ್ತಾಯಿಸಿದ್ದವು. ಈ ಸಂಬಂಧ ಬ್ರಿಟನ್‌ ಮತ್ತು ಅಮೆರಿಕ ಎಚ್ಚರಿಕೆಯನ್ನೂ ನೀಡಿದ್ದವು. ಆದರೆ ಇರಾನ್‌ ಸರ್ಕಾರ ಇದಕ್ಕೆ ಕಿವಿಗೊಟ್ಟಿಲ್ಲ.

ಅಕ್ಬರಿ ಅವರು ಇರಾನ್‌ನ ಸರ್ವೋಚ್ಚ ನಾಯಕ ಅಯತ್‌ಉಲ್ಲಾ ಅಲಿ ಖಾಮೇನಿ ಅವರ ಅತ್ಯಾಪ್ತರಾಗಿದ್ದರು. ಅವರನ್ನು ಗಲ್ಲಿಗೇರಿಸಿರುವುದನ್ನು ಖಂಡಿಸಿ ಬ್ರಿಟನ್, ಅಮೆರಿಕ ಸೇರಿದಂತೆ ಕೆಲ ದೇಶಗಳು ರಾಜತಾಂತ್ರಿಕ ಮಾರ್ಗದಲ್ಲಿ ಇರಾನ್‌ ಎದುರು ಪ್ರತಿಭಟನೆ ದಾಖಲಿಸಿವೆ.

ADVERTISEMENT

‘ಬ್ರಿಟನ್‌ ಮತ್ತು ಇರಾನ್‌ನ ಪೌರತ್ವ ಹೊಂದಿದ್ದ ಅಕ್ಬರಿ ಅವರನ್ನು ಗಲ್ಲಿಗೇರಿಸಿದ್ದು ಬರ್ಬರವಾದ ಕೃತ್ಯ. ಇದು ಖಂಡಿಸಲೇಬೇಕಾದ ನಡೆ’ ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್‌ ಕ್ಲೆವರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ತೀರ್ಮಾನವು ರಾಜಕೀಯ ಪ್ರೇರಿತವಾದುದು. ಇರಾನ್‌ನಲ್ಲಿ ಮನುಷ್ಯತ್ವ ಹಾಗೂ ನಾಗರಿಕರ ಜೀವಕ್ಕೆ ಬೆಲೆಯೇ ಇಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.