ADVERTISEMENT

ಇರಾನ್: ಎರಡು ವಾರ ಪೂರೈಸಿದ ಪ್ರತಿಭಟನೆ

ಏಜೆನ್ಸೀಸ್
Published 10 ಜನವರಿ 2026, 16:09 IST
Last Updated 10 ಜನವರಿ 2026, 16:09 IST
   

ದುಬೈ/ ಪ್ಯಾರಿಸ್: ಇರಾನ್‌ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಎರಡು ವಾರಗಳನ್ನು ಪೂರೈಸಿದೆ. ಶುಕ್ರವಾರ ರಾತ್ರಿ ಟೆಹರಾನ್‌ ಸೇರಿದಂತೆ ಹಲವೆಡೆ ದೊಡ್ಡ ಮಟ್ಟಿನಲ್ಲಿ ಪ್ರತಿಭಟನಾ ರ್‍ಯಾಲಿಗಳು ನಡೆದಿವೆ.

ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಭದ್ರತಾ ಪಡೆಗಳು ಕಠಿಣ ಕ್ರಮ ಕೈಗೊಳ್ಳುತ್ತವೆ ಎಂದು ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಶುಕ್ರವಾರ ಎಚ್ಚರಿಕೆ ನೀಡಿದ್ದರೂ ಪ್ರತಿಭಟನೆಯ ಕಾವು ತಣ್ಣಗಾಗಿಲ್ಲ.

ಗುರುವಾರದಿಂದ ಇಂಟರ್‌ನೆಟ್‌ ಮತ್ತು ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಿರುವುದರಿಂದ ಇರಾನ್‌, ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಆದ್ದರಿಂದ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿದೇಶದಿಂದ ಮಾಹಿತಿ ಕಲೆಹಾಕುವುದು ಕಷ್ಟಕರವಾಗಿದೆ.

ADVERTISEMENT

ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಈವರೆಗೆ 65 ಮಂದಿ ಮೃತಪಟ್ಟಿದ್ದಾರೆ. 2,300ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಮೆರಿಕ ಮೂಲದ ಮಾನವಹಕ್ಕುಗಳ ಸಂಸ್ಥೆ ತಿಳಿಸಿದೆ. ಭದ್ರತಾ ಪಡೆಯ ಕೆಲವು ಸಿಬ್ಬಂದಿ ಮೃತಪಟ್ಟಿರುವುದಾಗಿ ಇರಾನ್‌ನ ಸರ್ಕಾರಿ ವಾಹಿನಿ ವರದಿ ಮಾಡಿದೆ.

ಪಹ್ಲವಿ ಕರೆ: ಈ ಹಿಂದೆ ಇರಾನ್‌ ಅನ್ನು ಆಳಿದ್ದ ಪಹ್ಲವಿ ಸಾಮ್ರಾಜ್ಯದ ಮೊಹಮ್ಮದ್‌ ರೆಜಾ ಪಹ್ಲವಿ ಅವರ ಪುತ್ರ, ಈಗ ಅಮೆರಿಕದಲ್ಲಿ ನೆಲಸಿರುವ ರೆಜಾ ಪಹ್ಲವಿ ಅವರು ಸರ್ಕಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವಂತೆ ಪ್ರತಿಭಟನಕಾರರನ್ನು ಕೋರಿದ್ದಾರೆ. ಶುಕ್ರವಾರ ರಾತ್ರಿ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ವಾರಾಂತ್ಯದಲ್ಲಿ ಇನ್ನಷ್ಟು ಕಡೆ ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.