
ಸಾಂದರ್ಬಿಕ ಚಿತ್ರ
ದುಬೈ: ಇರಾನ್ ಸೇನಾಪಡೆಗಳು ವಶಪಡಿಸಿಕೊಂಡಿರುವ ಪೋರ್ಚುಗೀಸ್ ದ್ವಜ ಹೊತ್ತಿದ್ದ ಇಸ್ರೇಲ್‌ನ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಕಾನ್ಸಲರ್ ಸೇವೆಯನ್ನು ಬಳಸಿಕೊಳ್ಳಲು ಅಲ್ಲಿಯ ವಿದೇಶಿ ರಾಯಭಾರ ಕಚೇರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಇರಾನ್ ತಿಳಿಸಿದೆ.
ಇದರಿಂದಾಗಿ, ಇರಾನ್‌ನಲ್ಲಿ ಸಿಲುಕಿರುವ 17 ಮಂದಿ ಭಾರತೀಯ ಸಿಬ್ಬಂದಿ ಆದಷ್ಟು ಬೇಗ ಬಿಡುಗಡೆಯಾಗಲಿದ್ದಾರೆ ಎಂಬ ಭರವಸೆ ಮೂಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಪೋರ್ಚುಗಲ್‌ನ ಹೊಸ ವಿದೇಶಾಂಗ ವ್ಯವಹಾರಗಳ ಸಚಿವರು ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವ ಹೊಸೇನ್ ಅಮಿರಾಬ್ ದೊಲ್ಲಾಹಿಯನ್ ಜೊತೆ ದೂರವಾಣಿ ಸಂಭಾಷಣೆ ನಡೆಸಿ,ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷದ ಕುರಿತು ತಮ್ಮ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಇದೇ ವೇಳೆ, ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಸರಕು ಹಡಗಿನ ಕುರಿತೂ ಚರ್ಚಿಸಿದರು.
‘ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವುದನ್ನು ಮಾನವೀಯ ನೆಲೆಯಲ್ಲಿ ನೋಡಲಾಗುವುದು. ಟೆಹರಾನ್‌ನಲ್ಲಿಯ ರಾಯಭಾರಿಗಳು ತಮ್ಮ ದೇಶದ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಕಾನ್ಸಲರ್ ಸೇವೆಯನ್ನು ಬಳಸಿಕೊಳ್ಳಬಹುದು’ ಎಂದು ಹೊಸೇನ್ ಈ ವೇಳೆ ಹೇಳಿದರು.
ಇಸ್ರೇಲ್‌ಗೆ ಸೇರಿದ್ದ ಹಡಗನ್ನು ಏಪ್ರಿಲ್ 13ರಂದು ಇರಾನ್ ವಶಪಡಿಸಿಕೊಂಡಿತ್ತು. ಅದರಲ್ಲಿ 25 ಸಿಬ್ಬಂದಿ ಇದ್ದರು. ಅವರಲ್ಲಿ 17 ಮಂದಿ ಭಾರತೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.