ADVERTISEMENT

ಉಗ್ರ ಸಂಘಟನೆಗಳ ನೆಲೆ ಗುರಿಯಾಗಿಸಿ ಇರಾನ್‌ ದಾಳಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 14:38 IST
Last Updated 16 ಜನವರಿ 2024, 14:38 IST
ಇರಾನ್‌ನ ಇಸ್ಲಾಮಿಕ್‌ ರಿವೊಲುಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ನಡೆಸಿದ ದಾಳಿಯಿಂದ ಮಂಗಳವಾರ ಕುರ್ದಿಶ್ ವಲಯದ ಅರ್ಬಿಲ್‌ನಲ್ಲಿ ಜಖಂಗೊಂಡ ಕಟ್ಟಡದ ಅವಶೇಷವನ್ನು ಪರಿಶೀಲಿಸುತ್ತಿರುವ ಭದ್ರತಾ ಸಿಬ್ಬಂದಿ (ಎಎಫ್‌ಪಿ ಚಿತ್ರ)
ಇರಾನ್‌ನ ಇಸ್ಲಾಮಿಕ್‌ ರಿವೊಲುಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ನಡೆಸಿದ ದಾಳಿಯಿಂದ ಮಂಗಳವಾರ ಕುರ್ದಿಶ್ ವಲಯದ ಅರ್ಬಿಲ್‌ನಲ್ಲಿ ಜಖಂಗೊಂಡ ಕಟ್ಟಡದ ಅವಶೇಷವನ್ನು ಪರಿಶೀಲಿಸುತ್ತಿರುವ ಭದ್ರತಾ ಸಿಬ್ಬಂದಿ (ಎಎಫ್‌ಪಿ ಚಿತ್ರ)   

ಇರ್ಬಿಲ್ (ಇರಾಕ್‌): ಇರಾನ್‌ ವಿರೋಧಿ ಭಯೋತ್ಪಾದಕ ಸಂಘಟನೆಗಳ ನೆಲೆ ಹಾಗೂ ಗುಪ್ತದಳದ ಮುಖ್ಯ ಕಚೇರಿಯನ್ನು ಗುರಿಯಾಗಿಸಿ ವಾಯುದಾಳಿ ಆರಂಭಿಸಲಾಗಿದೆ ಎಂದು ಇರಾನ್‌ ಮಂಗಳವಾರ ಘೋಷಿಸಿದೆ.

ಕುರ್ದಿಶ್‌ ವಲಯದ ಇರ್ಬಿಲ್‌ನಲ್ಲಿ ಇರುವ ಅಮೆರಿಕ ಕಾನ್ಸುಲೇಟ್ ಕಚೇರಿಯ ಸಮೀಪ ಕ್ಷಿಪಣಿ ದಾಳಿ ನಡೆದ ಹಿಂದೆಯೇ ಈ ಪ್ರತಿದಾಳಿ ಆರಂಭಿಸಲಾಗಿದೆ ಎಂದು ಇರಾನ್‌ ತಿಳಿಸಿದೆ.

ಕುರ್ದಿಶ್‌ ಪ್ರಾದೇಶಿಕ ಸರ್ಕಾರದ ಭದ್ರತಾ ಸಮಿತಿಯು ಈ ಕುರಿತಂತೆ ಹೇಳಿಕೆ ನೀಡಿದೆ. ಈ ದಾಳಿಯಿಂದ ನಾಲ್ವರು ನಾಗರಿಕರು ಮೃತಪಟ್ಟಿದ್ದು, ಇತರೆ ಆರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ADVERTISEMENT

ಸ್ಥಳೀಯ ಉದ್ಯಮಿ ಪೇಶ್ರಾ ದಿಜಾಯಿ ಮತ್ತು ಅವರ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ ಎಂದು ಇರಾಕ್‌ ಸಂಸತ್ತಿನ ಮಾಜಿ ಸದಸ್ಯ ಮಶನ್‌ ಅಲ್ ಜಬೌರಿ ಅವರು ‘ಎಕ್ಸ್’ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕ್ಷಿಪಣಿಯೊಂದು ಇವರ ಮನೆ ಮೇಲೇ ಬಿದ್ದಿದೆ ಎಂದು ತಿಳಿಸಿದರು.

ಸಿರಿಯಾದ ಇಸ್ಲಾಮಿಕ್‌ ಸ್ಟೇಟ್‌ನ ನೆಲೆ ಗುರಿಯಾಗಿಸಿ ಹಲವು ಕ್ಷಿಪಣಿ ದಾಳಿ ನಡೆಸಿದ್ದು, ನೆಲೆಯನ್ನು ನಾಶಪಡಿಸಲಾಗಿದೆ. ಮೊಸಾದ್‌ನಲ್ಲಿನ ಇಸ್ರೇಲ್‌ನ ಗುಪ್ತದಳ ಏಜೆನ್ಸಿ ಕಚೇರಿ ಮೇಲೂ ದಾಳಿ ನಡೆದಿದೆ ಎಂದು ಇರಾನ್‌ ಇಸ್ಲಾಮಿಕ್‌ ರಿವೊಲುಷನರಿ ಗಾರ್ಡ್ಸ್‌ ಹೇಳಿಕೆ ನೀಡಿದೆ.

ಈ ತಿಂಗಳ ಆರಂಭದಲ್ಲಿ ಇರಾನ್‌ನಲ್ಲಿ ನಡೆದಿದ್ದ ಎರಡು ಆತ್ಮಾಹುತಿ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್ ಹೊತ್ತುಕೊಂಡಿತ್ತು. ಈ ದಾಳಿಯಲ್ಲಿ ಕನಿಷ್ಠ 84 ಜನರು ಸತ್ತಿದ್ದು, 284 ಜನರು ಗಾಯಗೊಂಡಿದ್ದರು.

ಇರಾನ್‌ನಿಂದ ಉಪ ರಾಯಭಾರಿ ಹಿಂದಕ್ಕೆ ಕರೆಸಿದ ಇರಾಕ್‌: 

ಇರಾನ್‌ ನಡೆಸಿದ ದಾಳಿಯನ್ನು ಖಂಡಿಸಿರುವ ಇರಾಕ್‌, ತೆಹ್ರೆನ್‌ನಲ್ಲಿರುವ ತನ್ನ ಉಪ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಲ್ಲದೆ ಬಾಗ್ದಾದ್‌ನಲ್ಲಿರುವ ಇರಾನ್‌ನ ರಾಯಭಾರ ಅನ್ನು ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದೆ.

ರಾತ್ರೋರಾತ್ರಿ ದಾಳಿ ನಡೆಸಿ ಹಲವು ನಾಗರಿಕರನ್ನು ಕೊಂದಿರುವ ಇರಾನ್‌ನ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಇರಾಕ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ಇರಾನಿನ ದಾಳಿಯು ಇರಾಕ್‌ ಗಣರಾಜ್ಯದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಇದು ಉತ್ತಮ ನೆರೆಹೊರೆ ಸಂಬಂಧ ಮತ್ತು ಅಂತರರಾಷ್ಟ್ರೀಯ ಕಾನೂನಿನ ತತ್ವಗಳಿಗೆ ವಿರೋಧಿಯಾಗಿದೆ. ಜೊತೆಗೆ ಇದು ಈ ಪ್ರದೇಶದ ಭದ್ರತೆಗೆ ಬೆದರಿಕೆ ಹಾಕಿದಂತಾಗಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

‘ಇರಾನ್‌ ನಡೆಸಿದ ದಾಳಿಗೆ ಯಾವುದೇ ಕಾರಣವಿಲ್ಲ. ಅದನ್ನು ಕ್ಷಮಿಸಲಾಗದು’ ಎಂದು ಕುರ್ದಿಶ್ ಪ್ರದೇಶದ ಪ್ರಧಾನಿ ಮಸ್ರೂರ್‌ ಬರ್ಜಾನಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.