
ದುಬೈ: ‘ಪ್ರತಿಭಟನಕಾರರನ್ನು ಹತ್ಯೆ ಮಾಡಲು ಯತ್ನಿಸಿದರೆ ನಾವು ಅವರ ರಕ್ಷಣೆಗೆ ಬರುತ್ತೇವೆ’ ಎಂದು ಎಚ್ಚರಿಕೆ ನೀಡಿದ್ಧ ಅಮೆರಿಕಕ್ಕೆ ತಿರುಗೇಟು ನೀಡಿದ ಇರಾನ್ ಸೇನಾ ಮುಖ್ಯಸ್ಥರು, ‘ಅಂಥ ಬೆದರಿಕೆಗಳಿಗೆ ಸೇನೆಯ ಮೂಲಕ ಉತ್ತರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕದ ಬೆದರಿಕೆಗಳ ಬಗ್ಗೆ ಮತ್ತು ಆರ್ಥಿಕತೆಯ ಕುಸಿತದಿಂದಾಗಿ ಸರ್ಕಾರದ ವಿರುದ್ಧ ಉಂಟಾಗಿರುವ ಜನಾಕ್ರೋಶದ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಅಮೀರ್ ಹಟಾಮಿ ಅವರು, ‘ಇರಾನ್ ವಿರುದ್ಧದ ಇಂಥ ಹೇಳಿಕೆಗಳನ್ನು ಬೆದರಿಕೆ ಎಂದು ಪರಿಗಣಿಸುತ್ತೇವೆ ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡದೆ ವಿರಮಿಸುವುದಿಲ್ಲ’ ಎಂದು ಹೇಳಿದ್ದಾರೆ.
‘ಇರಾನ್ ಸೇನೆಯು ಸನ್ನದ್ಧವಾಗಿದೆ. ಶತ್ರು ತಪ್ಪೆಸೆಗಿದರೆ ನಾವು ತಕ್ಕ ಉತ್ತರ ನೀಡುತ್ತೇವೆ. ಆಕ್ರಮಣಕಾರರ ಕೈ ಬರಿದಾಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಶತ್ರುಗಳಿಗೆ ನಾವು ಮಣಿಯುವುದಿಲ್ಲ’ ಎಂದು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಹೇಳಿದ್ದಾರೆ.
ಜನರ ಆಕ್ರೋಶ ಇಲ್ಲವಾಗಿಸುವ ಸಲುವಾಗಿ ಇರಾನ್ ಸರ್ಕಾರವು ದಿನಬಳಕೆಯ ಆಹಾರ ವಸ್ತುಗಳ ಖರೀದಿಗೆ ಪ್ರತಿ ತಿಂಗಳು ₹620 ಸಬ್ಸಿಡಿ ನೀಡುವ ಯೋಜನೆಯನ್ನು ಬುಧವಾರ ಜಾರಿಗೊಳಿಸಿದೆ.
ಇರಾನ್ ರಿಯಲ್ ಮೌಲ್ಯ ಕುಸಿತ ಹಾಗೂ ತಯಾರಕರಿಗೆ ಮತ್ತು ಆಮದುದಾರರಿಗೆ ನೀಡಲಾಗಿದ್ದ ಡಾಲರ್–ರಿಯಲ್ ವಿನಿಮಯ ಸಬ್ಸಿಡಿಯನ್ನು ಕಡಿತಗೊಳಿಸಿದ ಪರಿಣಾಮ ಅಡುಗೆ ಎಣ್ಣೆಯಂಥ ಪದಾರ್ಥಗಳ ಬೆಲೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಸ್ಥರು ಎಚ್ಚರಿಸಿದ್ದಾರೆ. ಇದರಿಂದಾಗಿ ಜನಾಕ್ರೋಶ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.