ADVERTISEMENT

ದಾಳಿಯ ಎಚ್ಚರಿಕೆ ನೀಡಿದ ಅಮೆರಿಕ ವಿರುದ್ಧ ತಿರುಗಿಬಿದ್ದ ಇರಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 7:40 IST
Last Updated 13 ಜನವರಿ 2026, 7:40 IST
ಆಯತೊಲ್ಲಾ ಖಮೇನಿ
ಆಯತೊಲ್ಲಾ ಖಮೇನಿ   

ನವದೆಹಲಿ: ಗಲಭೆ ಪೀಡಿತ ಇರಾನ್ ಮೇಲೆ ದಾಳಿ ನಡೆಸಿ, ನಾಗರಿಕರ ರಕ್ಷಣೆಗೆ ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲ ಖಮೇನಿ, ಈ ವಂಚನೆಯ ಕ್ರಮ ಮತ್ತು ದೇಶದ್ರೋಹಿ ಪ್ರತಿಭಟನಾಕಾರರಿಗೆ ನೀಡುತ್ತಿರುವ ಬೆಂಬಲ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಆಡಳಿತವು ಪ್ರತಿಭಟನಾಕಾರರ ಮೇಲೆ ಕ್ರಮ ಕೈಗೊಂಡಿದ್ದು, ಕನಿಷ್ಠ 646 ಜನರನ್ನು ಕೊಂದಿದೆ, ಈ ಹಿನ್ನೆಲೆಯಲ್ಲಿ ಜನರ ರಕ್ಷಣೆಗೆ ಯಾವುದೇ ಸಂದರ್ಭದಲ್ಲಿ ದಾಳಿಗೆ ಸಿದ್ಧ ಎಂದು ಅಮೆರಿಕ ಘೋಷಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಖಮೇನಿ, 'ಶ್ರೇಷ್ಠ ಇರಾನ್ ರಾಷ್ಟ್ರವು ಶತ್ರುಗಳ ಮುಂದೆ ತನ್ನ ದೃಢನಿಶ್ಚಯ ಮತ್ತು ಗುರುತನ್ನು ಪ್ರತಿಪಾದಿಸಿದೆ. ಇದು ಅಮೆರಿಕದ ರಾಜಕಾರಣಿಗಳಿಗೆ ಒಂದು ಎಚ್ಚರಿಕೆಯಾಗಿದೆ. ಅವರು ತಮ್ಮ ಮೋಸದ ಕೃತ್ಯಗಳನ್ನು ನಿಲ್ಲಿಸಬೇಕು ಮತ್ತು ದೇಶದ್ರೋಹಿ ಪ್ರತಿಭಟನಾಕಾರರನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು’ ಎಂದು 1989ರಿಂದ ಅಧಿಕಾರದಲ್ಲಿರುವ ಮತ್ತು 86 ವರ್ಷ ವಯಸ್ಸಿನ ಖಮೇನಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

‘ಇರಾನ್ ರಾಷ್ಟ್ರವು ಬಲಿಷ್ಠವಾಗಿದ್ದು, ಶಕ್ತಿಶಾಲಿಯಾಗಿದೆ ಮತ್ತು ಜಾಗೃತವಾಗಿದೆ. ಶತ್ರುವಿನ ಬಗ್ಗೆ ಅದಕ್ಕೆ ತಿಳಿದಿದೆ. ಯಾವಾಗಲೂ ವಾಸ್ತವವನ್ನು ಆಧರಿಸಿ ಕಾರ್ಯಾಚರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರತಿಭಟನಾ ಪೀಡಿತ ಇರಾನ್‌ನ ವಿಷಯದಲ್ಲಿ ಮಧ್ಯಪ್ರವೇಶಿಸಲು ಕಡಿಮೆ ಅಪಾಯದಿಂದ ಹೆಚ್ಚಿನ ಅಪಾಯದವರೆಗೆ ಆಯ್ಕೆಗಳನ್ನು ಪರಿಗಣಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ ಬೆನ್ನಲ್ಲೇ ಖಮೇನಿ ಹೇಳಿಕೆ ಬಂದಿದೆ.

ಆಡಳಿತ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಿ, ಪ್ರತಿಭಟನಾಕಾರರ ಸಾವಿಗೆ ಕಾರಣವಾಗುತ್ತಿರುವ ಇರಾನ್‌ ವಿರುದ್ಧ ದಾಳಿ ಮಾಡುವ ಬೆದರಿಕೆ ಹಾಕಿದ ಬೆನ್ನಲ್ಲೇ ತಮ್ಮ ದೇಶದ ನಾಗರಿಕರನ್ನು ಇರಾನ್ ತೊರೆಯುವಂತೆ ಅಮೆರಿಕ ಸೂಚನೆ ನೀಡಿದೆ.

ಇರಾನ್‌ನ ಖಮೇನಿ ಆಡಳಿತದಲ್ಲಿ ಬೆಲೆ ಏರಿಕೆ, ಅರಾಜಕತೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ಅದು ಹಿಂಸಾರೂಪಕ್ಕೆ ತಿರುಗಿ 600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮತ್ತಷ್ಟು ಹಿಂಸೆ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಪ್ರಜೆಗಳಿಗೆ ಇರಾನ್ ತೊರೆಯುವಂತೆ ಎಚ್ಚರಿಕೆ ನೀಡಿದೆ.

‘ಇರಾನ್‌ನಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿದ್ದು, ಹಿಂಸಾತ್ಮಕವಾಗಿ ಬದಲಾಗಬಹುದು. ಇದರ ಪರಿಣಾಮವಾಗಿ ಬಂಧನ ಮತ್ತು ಜೀವಹಾನಿ ಸಂಭವಿಸಬಹುದು. ಹೆಚ್ಚಿದ ಭದ್ರತಾ ಕ್ರಮಗಳು, ರಸ್ತೆ ಮುಚ್ಚುವಿಕೆ, ಸಾರ್ವಜನಿಕ ಸಾರಿಗೆ ಅಡಚಣೆಗಳು ಮತ್ತು ಇಂಟರ್ನೆಟ್ ನಿರ್ಬಂಧಗಳು ಮುಂದುವರೆದಿವೆ’ಎಂದು ಅದು ಎಚ್ಚರಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.