ADVERTISEMENT

‘ನಿಯಮಾನುಸಾರ’ ಬಗ್ದಾದಿ ಅಂತ್ಯಕ್ರಿಯೆ

ಅಮೆರಿಕ ಸೇನಾಧಿಕಾರಿಗಳ ಮಾಹಿತಿ; ಗಾಯಗೊಂಡಿದ್ದ ಶ್ವಾನದ ಚೇತರಿಕೆ

ಪಿಟಿಐ
Published 29 ಅಕ್ಟೋಬರ್ 2019, 19:50 IST
Last Updated 29 ಅಕ್ಟೋಬರ್ 2019, 19:50 IST
ಅಬುಬಕರ್‌ ಅಲ್‌ ಬಗ್ದಾದಿ
ಅಬುಬಕರ್‌ ಅಲ್‌ ಬಗ್ದಾದಿ   

ವಾಷಿಂಗ್ಟನ್‌ : ಸೇನಾ ಕಾರ್ಯಾಚರಣೆಯಲ್ಲಿ ಹತನಾದ ಐಎಸ್‌ ಸ್ಥಾಪಕ ಅಬುಬಕರ್‌ ಅಲ್‌ ಬಗ್ದಾದಿ ದೇಹವನ್ನು ಸೇನಾ ಸಂಘರ್ಷದ ನಿಯಮಗಳು ಮತ್ತು ಸಾಮಾನ್ಯ ನಿರ್ವಹಣಾ ಪ್ರಕ್ರಿಯೆ ಅನುಸಾರ ವಿಲೇವಾರಿ ಮಾಡಲಾಗಿದೆ ಎಂದು ಅಮೆರಿಕ ಸೇನೆ ಮಂಗಳವಾರ ಪ್ರಕಟಿಸಿದೆ.

ಅಮೆರಿಕ ಸೇನೆ ಜಂಟಿ ಮುಖ್ಯಸ್ಥ ಮಾರ್ಕ್‌ ಮಿಲೆ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದರು. ಸಿರಿಯಾದ ಇದ್ಲಿಬ್‌ನಲ್ಲಿ ಅಮೆರಿಕ ಸೇನೆ ಶನಿವಾರ ನಡೆಸಿದ್ದ ಕಾರ್ಯಾಚರಣೆಯಲ್ಲಿ ಬಗ್ದಾದಿ ಹತ್ಯೆಯಾಗಿತ್ತು.

‘ಗುರುತು ದೃಢಪಡಿಸಿಕೊಳ್ಳಲು ಬಗ್ದಾದಿಯ ದೇಹದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ತರಲಾಗಿತ್ತು. ಉಳಿದ ಭಾಗಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಕಾರ್ಯಾಚರಣೆಯ ಚಿತ್ರಗಳು ಮತ್ತು ವಿಡಿಯೊಗಳ ವರ್ಗೀಕರಣ ಪ್ರಕ್ರಿಯೆ ನಡೆದಿದೆ ಎಂದೂ ತಿಳಿಸಿದರು. 'ಕಾರ್ಯಾಚರಣೆಯ ವಿಡಿಯೊ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಿದ್ದೇವೆ' ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಪ್ರಕಟಿಸಿದ್ದರು.

ಸಾವಿನ ಕೊನೆ ಕ್ಷಣಗಳಲ್ಲಿ ಬಗ್ದಾದಿ ಅಳುತ್ತಿದ್ದ ಎಂಬ ಟ್ರಂಪ್‌ ಹೇಳಿಕೆಯ ಕುರಿತು ಗಮನಸೆಳೆದಾಗ, ‘ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವರ ಮಾಹಿತಿ ಆಧರಿಸಿ ಅಧ್ಯಕ್ಷರು ಹಾಗೆ ಹೇಳಿರಬಹುದು’ ಎಂದರು.

ಕಾರ್ಯಾಚರಣೆಯಲ್ಲಿ ಸೇನೆಯ ಯಾರೊಬ್ಬರೂ ಸತ್ತಿಲ್ಲ. ಸ್ಥಳದಲ್ಲಿ ಸೇನೆಯು ಇಬ್ಬರು ಪುರುಷರು ಮತ್ತು ಕೆಲ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿತು. ಅವುಗಳ ವರ್ಗೀಕರಣ ನಡೆದಿದೆ. ಈ ಬಗ್ಗೆ ಯಾವುದೇ ವಿವರಣೆ ನೀಡಲಾಗದು ಎಂದು ಪ್ರತಿಕ್ರಿಯಿಸಿದರು.

ಐಎಸ್‌ಗೆ ದೊಡ್ಡ ಪೆಟ್ಟು: ಈ ಮಧ್ಯೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ಅವರು, ‘ಬಗ್ದಾದಿ ಹತ್ಯೆ ಐಎಸ್‌ಗೆ ದೊಡ್ಡ ಪೆಟ್ಟು. ಡೆಲ್ಟಾ ತುಕಡಿ ಕಾರ್ಯಾಚರಣೆ ನಡೆಸಿದ ಪರಿ ಶ್ಲಾಘನೀಯ’ ಎಂದರು.

ಸಮುದ್ರಕ್ಕೆ ಶವ: ಪೆಂಟಗನ್‌ನ ಇನ್ನೊಬ್ಬ ಅಧಿಕಾರಿಯ ಅನುಸಾರ, ಬಗ್ದಾದಿಯ ದೇಹವನ್ನು ಸಮುದ್ರದಲ್ಲಿ, ಹೆಸರು ಬಹಿರಂಗಪಡಿಸಲಾಗದ ಸ್ಥಳದಲ್ಲಿ ಹಾಕಲಾಗಿದೆ. 2011ರಲ್ಲಿ ಅಲ್‌ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ ದೇಹವನ್ನು ಇದೇ ಮಾದರಿ ವಿಲೇವಾರಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.