ADVERTISEMENT

ಇಸ್ರೇಲ್ ದಾಳಿ: 9 ಮಕ್ಕಳು ಸೇರಿ 28 ಸಾವು

ಏಜೆನ್ಸೀಸ್
Published 13 ಜುಲೈ 2025, 14:18 IST
Last Updated 13 ಜುಲೈ 2025, 14:18 IST
ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಬಾಲಕನ ಶರೀರದ ಮುಂದೆ ರೋಧಿಸುತ್ತಿರುವ ಪ್ಯಾಲೆಸ್ತೀನಿ ಮಹಿಳೆ – ಎಎಫ್‌ಪಿ ಚಿತ್ರ
ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಬಾಲಕನ ಶರೀರದ ಮುಂದೆ ರೋಧಿಸುತ್ತಿರುವ ಪ್ಯಾಲೆಸ್ತೀನಿ ಮಹಿಳೆ – ಎಎಫ್‌ಪಿ ಚಿತ್ರ   

ದೀರ್ ಅಲ್-ಬಲಾಹ್ (ಗಾಜಾ ಪಟ್ಟಿ): ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಭಾನುವಾರ ನಡೆಸಿದ ವಾಯುದಾಳಿಯಲ್ಲಿ 6 ಮಕ್ಕಳು ಸೇರಿ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿ ಹೇಳಿದ್ದಾರೆ. ಮಧ್ಯವರ್ತಿಗಳು ಕದನ ವಿರಾಮಕ್ಕೆ ಪ್ರಯತ್ನ ನಡೆಸುತ್ತಿರುವ ನಡುವೆ ಈ ದಾಳಿ ನಡೆದಿದೆ.

ಸುಮಾರು 20 ಮಕ್ಕಳು ಮತ್ತು 14 ವಯಸ್ಕರು ಭಾನುವಾರ ಬೆಳಿಗ್ಗೆ ನೀರು ಸಂಗ್ರಹಿಸಲು ಸಾಲು ನಿಂತಿದ್ದರು. ಈ ವೇಳೆ ವಾಯುದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿ ರಮದಾನ್ ನಾಸ್ಸರ್ ಅಸೋಸಿಯೇಟೆಡ್ ಪ್ರೆಸ್‌ಗೆ ಹೇಳಿದ್ದಾರೆ.

ಮಧ್ಯ ಗಾಜಾದ ಝವೈದಾ ನಗರದ ಮನೆಯ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 3 ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿ 9 ಜನರು ಮೃತಪಟ್ಟಿದ್ದಾರೆ ಎಂದು ಅಲ್‌–ಅಖ್ಸಾ ಮಾರ್ಟಿಯರ್ಸ್‌ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

2023ರ ಅಕ್ಟೋಬರ್ 7 ನಂತರ ಇಸ್ರೇಲ್ ದಾಳಿಯಲ್ಲಿ 57,800 ಪ್ಯಾಲೆಸ್ತೀನಿಯನ್ನರು ಈ ವರೆಗೆ ಮೃತಪಟ್ಟಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.

21 ತಿಂಗಳಿನಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಮತ್ತು ಕೆಲವು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈ ಒಪ್ಪಂದದ ಬಗ್ಗೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಳೆದ ವಾರ ಟ್ರಂಪ್ ಆಡಳಿತದೊಂದಿಗೆ ವಾಷಿಂಗ್ಟನ್‌ನಲ್ಲಿ ಮಾತನಾಡಿದ್ದರು. ಆದಾಗ್ಯೂ, ಇಸ್ರೇಲಿ ಸೇನೆಯ ನಿಯೋಜನೆಯ ವಿಚಾರವು ಒಪ್ಪಂದಕ್ಕೆ ಅಡಚಣೆಯಾಗಿದೆ.

ದಕ್ಷಿಣ ಗಾಝಾದ ತನ್ನ ಪ್ರಮುಖ ಭೂಮಾರ್ಗದಲ್ಲಿ ತನ್ನ ಸೇನೆಯನ್ನು ಉಳಿಸಿಕೊಳ್ಳಲು ಇಸ್ರೇಲ್ ಬಯಸಿದೆ. ಇದನ್ನು ಹಮಾಸ್ ವಿರೋದಿಸಿದೆ. ತಾತ್ಕಾಲಿಕ ಕದನ ವಿರಾಮದ ನಂತರ, ಯುದ್ಧ ಮುಂದುವರೆಸಲು ಇಸ್ರೇಲ್ ಬಯಸುತ್ತಿದೆ ಎಂದು ಅದು ಪ್ರತಿಪಾದಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.