ಇಸ್ರೇಲ್ ದಾಳಿಗೆ ಖಾನ್ ಯೂನುಸ್ ನಗರದಲ್ಲಿರುವ ನಾಸೆರ್ ಆಸ್ಪತ್ರೆಗೆ ಸೋಮವಾರ ಹಾನಿಯಾಗಿದೆ
ದಾರ್ ಅಲ್–ಬಲಾ/ಜೆರುಸೆಲೇಂ: ಗಾಜಾದ ಖಾನ್ ಯೂನುಸ್ ನಗರದಲ್ಲಿರುವ ನಾಸೆರ್ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನೆ ಸೋಮವಾರ ಡ್ರೋನ್ ದಾಳಿ ನಡೆಸಿದೆ. ಘಟನೆಯಲ್ಲಿ ಐವರು ಪತ್ರಕರ್ತರು ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ಇಡೀ ಗಾಜಾ ಪಟ್ಟಿಯಲ್ಲಿ ಇದೊಂದೇ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿತ್ತು.
‘ಆಸ್ಪತ್ರೆಯ ನಾಲ್ಕನೇ ಮಹಡಿ ಮೇಲೆ ಮೊದಲ ಡ್ರೋನ್ ಬಂದು ಅಪ್ಪಳಿಸಿತು. ಬಳಿಕ ರಕ್ಷಣಾ ಕಾರ್ಯಗಳು ಆರಂಭವಾದವು, ಪತ್ರಕರ್ತರೂ ಸೇರಿ ಜನರು ಇತ್ತ ಓಡಿ ಬಂದರು. ಅಷ್ಟರಲ್ಲಿ ಮತ್ತೊಂದು ಡ್ರೋನ್ ಅಪ್ಪಳಿಸಿತು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
‘ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ನಾಸೆರ್ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ನಡೆಸಿರಲಿಲ್ಲ. ದಕ್ಷಿಣ ಗಾಜಾದಲ್ಲಿಯೇ ಈ ಆಸ್ಪತ್ರೆಯು ಅತ್ಯಂತ ದೊಡ್ಡ ಆಸ್ಪತ್ರೆ. ಆದರೆ, ಈಗ ಆಸ್ಪತ್ರೆಗೆ ಸಿಬ್ಬಂದಿ ಮತ್ತು ವಿವಿಧ ವೈದ್ಯಕೀಯ ಪರಿಕರ, ಔಷಧಗಳ ಕೊರತೆ ಇದೆ’ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಗಾಜಾ ಪಟ್ಟಿಯಲ್ಲಿನ ಹಲವು ಆಸ್ಪತ್ರೆಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇರುತ್ತದೆ. ಶೋಧ ಕಾರ್ಯವನ್ನೂ ನಡೆಸುತ್ತದೆ. ಆಸ್ಪತ್ರೆಯೊಳಗೆ ಕೂತು ಭಯೋತ್ಪಾದಕರು ಕೆಲಸ ಮಾಡುತ್ತಾರೆ ಎನ್ನುವುದು ಇಸ್ರೇಲ್ ವಾದ. ಆದರೆ, ಇದಕ್ಕೆ ಆ ದೇಶವು ಯಾವುದೇ ಸಾಕ್ಷ್ಯ ಒದಗಿಸಿಲ್ಲ.
ಶಿಫಾ ಹಾಗೂ ಅಲ್ ಔದಾ ಆಸ್ಪತ್ರೆಗೆ ಅಗತ್ಯವಾಗಿರುವ ವಿವಿಧ ಪರಿಕರ, ಔಷಧಗಳನ್ನು ಪೂರೈಸುವ ವ್ಯಕ್ತಿಗಳ ಮೇಲೆಯೂ ಇಸ್ರೇಲ್ ಸೇನೆ ದಾಳಿ ನಡೆಸಿದೆ. ಕೆಲವು ಬಾರಿ ಕ್ಷಿಪಣಿ ದಾಳಿ ನಡೆಸಿದರೆ, ಕೆಲವು ಬಾರಿ ಗುಂಡಿಕ್ಕಿ ಹತ್ಯೆ ಮಾಡಿದೆ.
ಅಸೋಸಿಯೇಟೆಡ್ ಪ್ರೆಸ್‌ನ ಹವ್ಯಾಸಿ ಪತ್ರಕರ್ತೆ ಮಾರಿಯಂ ದಗ್ಗಾ ಅಲ್–ಜಜೀರಾದ ಪತ್ರಕರ್ತ ಮೊಹಮ್ಮದ್ ಸಲಾಂ ರಾಯಿಟರ್ಸ್‌ನ ಛಾಯಾಗ್ರಾಹಕ ಹುಸ್ಸಂ ಅಲ್ ಮಸ್ರಿ ಅವರು ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಗುತ್ತಿಗೆ ಆಧಾರದಲ್ಲಿ ರಾಯಿಟರ್ಸ್‌ನಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಹಾತೆಮ್ ಖಾಲಿದ್ ಅವರಿಗೆ ಗಾಯಗಳಾಗಿವೆ. ‘ಎಎಫ್‌ಪಿ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತಿದ್ದ ಸ್ಥಳೀಯ ಪತ್ರಕರ್ತರಾದ ಮೊಅಝ್ ಅಬು ತಾಹಾ ಮತ್ತು ಅಹ್ಮದ್ ಅಬು ಅಜೀಜ್ ಅವರು ಮೃತಪಟ್ಟಿದ್ದಾರೆ’ ಎಂದು ಪ್ಯಾಲೆಸ್ಟೀನ್ ಪತ್ರಕರ್ತರ ಸಿಂಡಿಕೇಟ್ ಹೇಳಿದೆ. ಯುದ್ಧ ಆರಂಭವಾದಾಗಿನಿಂದಲೂ 33 ವರ್ಷದ ಮರಿಯಂ ಹವ್ಯಾಸಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮರಿಯಂ ಅವರಿಗೆ 12 ವರ್ಷದ ಮಗನಿದ್ದಾನೆ. ಯುದ್ಧ ಆರಂಭವಾಗುತ್ತಿದ್ದಂತೆಯೇ ಮಗನನ್ನು ಬೇರೆಡೆ ಇವರು ಸ್ಥಳಾಂತರಿಸಿದ್ದರು. ಇದೇ ಆಸ್ಪತ್ರೆ ಸುತ್ತಮುತ್ತವೇ ಇವರು ಕಾರ್ಯನಿರ್ವಹಿಸುತ್ತಿದ್ದರು. ಹಸಿವಿನಿಂದ ನಿತ್ರಾಣಗೊಂಡಿರುವ ಪುಟ್ಟ ಮಕ್ಕಳನ್ನು ಉಳಿಸಿಕೊಳ್ಳಲು ವೈದ್ಯರು ಹೇಗೆ ಹರಸಾಹಸ ಪಡುತ್ತಿದ್ದಾರೆ ಎನ್ನುವ ಕುರಿತು ಇತ್ತೀಚೆಗಷ್ಟೇ ಮರಿಯಂ ವರದಿ ಮಾಡಿದ್ದರು.
ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಯುದ್ಧ ಆರಂಭವಾದಾಗಿನಿಂದ ಇಲ್ಲಿಯವರೆಗೆ ಮೃತಪಟ್ಟಿರುವ ಪತ್ರಕರ್ತರ ಸಂಖ್ಯೆ-200
ರಷ್ಯಾ–ಉಕ್ರೇನ್ ಯುದ್ಧದಲ್ಲಿ ಮೃತಪಟ್ಟಿರುವ ಪತ್ರಕರ್ತರ ಸಂಖ್ಯೆ-18
2025ರ ಒಳಗೆ ಹಿಜ್ಬುಲ್ಲಾ ಸಂಘಟನೆಯನ್ನು ಸಂಪೂರ್ಣ ನಾಶ ಮಾಡಬೇಕು ಅವರನ್ನು ನಿಶಸ್ತ್ರವಾಗಿಸಬೇಕು ಎಂದು ಲೆಬನಾನ್ ಸರ್ಕಾರ ತೆಗೆದುಕೊಂಡಿರುವ ‘ಅಭೂತಪೂರ್ವ ನಿರ್ಧಾರ’ವನ್ನು ಸ್ವಾಗತಿಸುತ್ತೇನೆ. ಹೀಗಾದರೆ ಬಹುಶಃ ದಕ್ಷಿಣ ಲೆಬನಾನ್‌ನಲ್ಲಿ ನಿಯೋಜಿಸಲಾಗಿರುವ ಇಸ್ರೇಲ್ ಸೇನೆಯನ್ನು ವಾಪಸ್ ಕರೆಸಿಕೊಳ್ಳುತ್ತೇವೆಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.