ADVERTISEMENT

ಇರಾನ್ ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿ ಗುರಿಯಾಗಿಸಿಕೊಂಡು ದಾಳಿ: ಇಸ್ರೇಲ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 2:40 IST
Last Updated 15 ಜೂನ್ 2025, 2:40 IST
   

ಟೆಲ್ ಅವೀವ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್ ಮೇಲೆ ಇಸ್ರೇಲ್ ಭಯಾನಕ ದಾಳಿ ನಡೆಸುತ್ತಿದೆ. ಇರಾನ್‌ನ ಇಂಧನ ಕೈಗಾರಿಕೆ ಮತ್ತು ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಕ್ಷಿಪಣಿ ದಾಳಿ ನಡೆಸಿದೆ.

ಇರಾನ್‌ನ ವೇಗವಾಗಿ ವೃದ್ಧಿಗೊಳ್ಳುತ್ತಿದ್ದ ಪರಮಾಣು ಶಕ್ತಿಯನ್ನು ನಾಶಮಾಡಲು ಎರಡು ದಿನಗಳ ಹಿಂದೆ ಇಸ್ರೇಲ್ ನಡೆಸಿದ ಹಠಾತ್ ದಾಳಿ ಬಳಿಕ ಸಂಘರ್ಷ ಮತ್ತೆ ಬಿಗಡಾಯಿಸಿದೆ. ಈ ದಾಳಿಯಲ್ಲಿ ಇರಾನ್‌ನ ಮೂವರು ಪರಮಾಣು ವಿಜ್ಞಾನಿಗಳು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಕ್ಷಿಪಣಿ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಇಸ್ರೇಲ್‌ನ ಗಲಿಲೀ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ನಾಲ್ಕು ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್ ಸಹ ಟೆಹ್ರಾನ್ ಮೇಲೆ ಪ್ರತಿದಾಳಿ ನಡೆಸಿದೆ. ಟೆಹ್ರಾನ್‌ನಲ್ಲಿರುವ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಮತ್ತು ದೇಶದ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಸಾವು ನೋವಿನ ಬಗ್ಗೆ ಇನ್ನಷ್ಟೇ ವರದಿ ಬರಬೇಕಿದೆ.

ADVERTISEMENT

ನಿರಂತರ ಸಂಘರ್ಷದ ಮಧ್ಯೆ, ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಇರಾನ್ ಮತ್ತು ಅಮೆರಿಕ ನಡುವಿನ ಯೋಜಿತ ಮಾತುಕತೆಗಳನ್ನು ರದ್ದುಗೊಳಿಸಲಾಗಿದೆ.

ಟೆಹ್ರಾನ್ ಹೊತ್ತಿ ಉರಿಯುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಟೆಹ್ರಾನ್ ನಗರದ ಪೂರ್ವ ಮತ್ತು ಪಶ್ಚಿಮದಲ್ಲಿ ಸ್ಫೋಟಗಳು ಕೇಳಿಬಂದಿವೆ ಎಂದು ಇರಾನ್‌ನ ಸರ್ಕಾರಿ ವಾಹಿನಿ ವರದಿ ಮಾಡಿದೆ.

ಇಸ್ರೇಲ್ ಭದ್ರತಾ ಸಚಿವ ಸಂಪುಟ ಸಭೆ ಸೇರುತ್ತಿದ್ದಂತೆ ಮಧ್ಯರಾತ್ರಿಯಲ್ಲಿ ಇರಾನ್ ದಾಳಿ ನಡೆಸಿದೆ. ಇಸ್ರೇಲ್ ಜೆಟ್‌ಫೈಟರ್‌ಗಳಿಗಾಗಿ ಇಂಧನ ಉತ್ಪಾದನಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.