ADVERTISEMENT

‘ಜಪಾನ್‌ ವೀಕ್’ ಸಂಭ್ರಮಕ್ಕೆ ಕರೆ’: ಜಪಾನ್ ಉದ್ಯಮಿಗಳ ಜೊತೆ ಮೋದಿ ಸಂವಾದ

ಪಿಟಿಐ
Published 23 ಮೇ 2022, 19:31 IST
Last Updated 23 ಮೇ 2022, 19:31 IST
ಜಪಾನ್ ಉದ್ಯಮಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಭೆ ನಡೆಸಿದ ಬಳಿಕ ಛಾಯಾಚಿತ್ರಕ್ಕೆ ಪೋಸು ನೀಡಿದರು –ಪಿಟಿಐ ಚಿತ್ರ
ಜಪಾನ್ ಉದ್ಯಮಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಭೆ ನಡೆಸಿದ ಬಳಿಕ ಛಾಯಾಚಿತ್ರಕ್ಕೆ ಪೋಸು ನೀಡಿದರು –ಪಿಟಿಐ ಚಿತ್ರ   

ಟೋಕಿಯೊ: ಭಾರತದ ಅಭಿವೃದ್ಧಿಯ ಪಯಣದಲ್ಲಿ ಜಪಾನ್‌ನ ಕೊಡುಗೆಯನ್ನು ಆಚರಿಸುವ ಉದ್ದೇಶದಿಂದ ‘ಜಪಾನ್ ವೀಕ್’ ಕಾರ್ಯಕ್ರಮ ಹಮ್ಮಿಕೊಳ್ಳುವ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದರು. ಈ ಸಂಭ್ರಮದಲ್ಲಿ ಜಪಾನ್‌ ಕಂಪನಿಗಳು ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.

ಜಪಾನ್‌ನ ಉದ್ಯಮಿಗಳ ಜೊತೆ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸೋಮವಾರ ಮಾತ ನಾಡಿದರು. ಜಪಾನ್‌ನ 34 ಕಂಪನಿಗಳ ಮುಖ್ಯಸ್ಥರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಪೈಕಿ ಬಹುತೇಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿದ್ದು, ದೇಶದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ. ಆಟೊಮೊಬೈಲ್, ಎಲೆಕ್ಟ್ರಾನಿಕ್, ಸೆಮಿಕಂಡಕ್ಟರ್, ಉಕ್ಕು, ತಂತ್ರಜ್ಞಾನ, ವ್ಯಾಪಾರ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಈ ಕಂಪನಿಗಳು ಕೆಲಸ ಮಾಡುತ್ತಿವೆ.

ಹೋಂಡಾ ಮೋಟಾರ್ ಕಾರ್ಪ್, ಟೊಯೊಟ ಮೋಟಾರ್ ಕಾರ್ಪೊರೇಷನ್, ಸುಜುಕಿ ಮೋಟಾರ್ ಕಾರ್ಪೊರೇಷನ್, ಕವಾಸಾಕಿ ಹೆವಿ ಇಂಡಸ್ಟ್ರೀಸ್, ನಿಪ್ಪೋನ್ ಸ್ಟೀಲ್ಸ್ ಸೇರಿದಂತೆ ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಪ್ರಧಾನಿ ಸಭೆಯಲ್ಲಿ ಭಾಗಿಯಾಗಿದ್ದರು.

ADVERTISEMENT

‘ಜಪಾನ್‌ನ ಅಗ್ರಗಣ್ಯ ಕಂಪನಿಗಳ ಸಿಇಒಗಳ ಜೊತೆ ಮಾತುಕತೆ ನಡೆಸಿದ್ದು, ಭಾರತದಲ್ಲಿ ಹೂಡಿಕೆಗೆ ಇರುವ ಅಪಾರ ಅವಕಾಶಗಳನ್ನು ಪ್ರಸ್ತಾಪಿಸಲಾಯಿತು’ ಎಂದು ಪ್ರಧಾನಿ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಾರತ ಹಾಗೂ ಜಪಾನ್‌ ಸಹಜ ಭಾಗೀದಾರ ದೇಶಗಳಾಗಿದ್ದು, ಈ ಮೈತ್ರಿಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಉದ್ಯಮ ವಲಯವು ರಾಯಭಾರಿಗಳ ರೀತಿ ಕೆಲಸ ಮಾಡಿದೆ ಎಂದು ಪ್ರಧಾನಿ ಶ್ಲಾಘಿಸಿದರು. 2020ರ ಮಾರ್ಚ್‌ನಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾಅವರು ಭಾರತಕ್ಕೆ ಭೇಟಿ ನೀಡಿದ ವೇಳೆ, ಮುಂದಿನ ಐದು ವರ್ಷಗಳಲ್ಲಿ ಸುಮಾರು ₹3 ಲಕ್ಷ ಕೋಟಿ (5 ಲಕ್ಷ ಕೋಟಿ ಜಪಾನ್ ಯೆನ್) ಹೂಡಿಕೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದನ್ನು ಪ್ರಧಾನಿ ಉಲ್ಲೇಖಿಸಿದರು.

ಭಾರತದಲ್ಲಿ ನವೋದ್ಯಮಗಳ ಉತ್ತೇಜನಕ್ಕೆ ಇರುವ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ವಿವರಿಸಿದರು. ಜಾಗತಿಕ ಹಿನ್ನಡೆಯ ನಡುವೆಯೂ ಭಾರತವು 6.5 ಲಕ್ಷ ಕೋಟಿ (8,400 ಕೋಟಿ ಡಾಲರ್) ವಿದೇಶಿ ಹೂಡಿಕೆ ಆಕರ್ಷಿಸಿದೆ ಎಂದರು.

‘ಭಾರತಕ್ಕೆ ಬನ್ನಿ, ಭಾರತದ ಜೊತೆ ಕೈಜೋಡಿಸಿ’
ಜಪಾನ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತಕ್ಕೆ ಬನ್ನಿ, ಭಾರತದ ಜೊತೆ ಕೈಜೋಡಿಸಿ’ (ಭಾರತ್ ಚಲೋ, ಭಾರತ್ ಸೇ ಜುಡೊ) ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಮೂಲಸೌಕರ್ಯ, ಆಡಳಿತ, ಡಿಜಿಟಲ್ ಕ್ರಾಂತಿ ಕ್ಷೇತ್ರಗಳಲ್ಲಿ ಸರ್ಕಾರ ತೆಗೆದುಕೊಂಡಿರುವ ಸುಧಾರಣಾ ಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ 700 ಜನರು ಭಾಗಿಯಾಗಿದ್ದರು.

ಜಪಾನ್‌ನಲ್ಲಿ ನೆಲೆಸಿರುವ ಭಾರತೀಯರು ಭಾರತದ ಜೊತೆ ಇಟ್ಟುಕೊಂಡಿರುವ ನಂಟು, ಅವರ ಕೌಶಲ, ಪ್ರತಿಭೆ ಹಾಗೂ ಉದ್ಯಮಶೀಲತೆಯನ್ನು ಪ್ರಧಾನಿ ಶ್ಲಾಘಿಸಿದರು.

ಬಾಲಕನಿಗೆ ಹಸ್ತಾಕ್ಷರ: ತಮ್ಮ ಭೇಟಿಗೆ ಹೋಟೆಲ್ ಹೊರಗಡೆ ಕಾಯುತ್ತಿದ್ದ ಮಕ್ಕಳು ಹಾಗೂ ಅವರ ಪೋಷಕರ ಜೊತೆ ಪ್ರಧಾನಿ ಸಂವಾದ ನಡೆಸಿದರು. ಈ ವೇಳೆ ನಿರರ್ಗಳವಾಗಿ ಹಿಂದಿ ಮಾತನಾಡಿದ ರಿಟ್ಸ್ ಕೀ ಎಂಬ ಬಾಲಕನನ್ನು ಪ್ರಧಾನಿ ಶ್ಲಾಘಿಸಿದರು. ಬಾಲಕನಿಗೆ ಹಸ್ತಾಕ್ಷರ ನೀಡಿದರು.

ಒಪ್ಪಂದಕ್ಕೆ ಸಹಿ
ಭಾರತ–ಅಮೆರಿಕ ಹೂಡಿಕೆ ಪ್ರೋತ್ಸಾಹ ಒಪ್ಪಂದಕ್ಕೆ (ಐಐಎ) ಸಹಿ ಹಾಕಿದವು. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹಾಗೂ ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಸಿಎಫ್) ಸಿಇಒ ಸ್ಕಾಟ್ ನಾಥನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಕ್ವಾಡ್ ಶೃಂಗಸಭೆಯಲ್ಲಿ ಮೋದಿ–ಬೈಡನ್ ಸಭೆಗೂ ಮುನ್ನ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಭಾರತದಲ್ಲಿ ₹30,000 ಕೋಟಿ ಹೂಡಿಕೆಯನ್ನು ಡಿಸಿಎಫ್‌ ಪರಿಗಣಿಸುತ್ತಿದೆ.

*

ಪ್ರತಿಯೊಬ್ಬ ಭಾರತೀಯರು ಜಪಾನ್‌ಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಇದೇ ರೀತಿ ಜಪಾನಿಯರು ಭಾರತಕ್ಕೆ ಭೇಟಿ ನೀಡಬೇಕು.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.