ADVERTISEMENT

ವಿಶ್ವಸಂಸ್ಥೆ: ಉನ್ನತ ಮಟ್ಟದ ಸಲಹಾ ಮಂಡಳಿಗೆ ಜಯಂತಿ ಘೋಷ್‌ ನೇಮಕ

ಪಿಟಿಐ
Published 25 ಜನವರಿ 2021, 14:34 IST
Last Updated 25 ಜನವರಿ 2021, 14:34 IST
ಜಯಂತಿ ಘೋಷ್‌ –ಟ್ವಿಟರ್‌ ಚಿತ್ರ
ಜಯಂತಿ ಘೋಷ್‌ –ಟ್ವಿಟರ್‌ ಚಿತ್ರ   

ನ್ಯೂಯಾರ್ಕ್‌: ಭಾರತದ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಜಯಂತಿ ಘೋಷ್‌ ಅವರು ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಲಹಾ ಮಂಡಳಿಗೆ (ಎಚ್‌ಎಲ್‌ಎಬಿ) ಸೋಮವಾರ ನೇಮಕಗೊಂಡಿದ್ದಾರೆ.

65 ವರ್ಷ ವಯಸ್ಸಿನ ಜಯಂತಿ ಅವರು ಮೆಸ್ಯಾಚುಸೆಟ್ಸ್‌ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಸುಮಾರು 35 ವರ್ಷಗಳ ಕಾಲ ಅರ್ಥಶಾಸ್ತ್ರ ವಿಷಯವನ್ನು ಬೋಧಿಸಿದ್ದರು. ಅನೇಕ ಪುಸ್ತಕಗಳನ್ನೂ ಹೊರತಂದಿದ್ದಾರೆ.

‘ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಹಾಗೂ ದಕ್ಷ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿರುವ 20 ಮಂದಿಯನ್ನು ಎಚ್‌ಎಲ್‌ಎಬಿಗೆ ನೇಮಿಸಲಾಗಿದೆ’ ಎಂದು ವಿಶ್ವಸಂಸ್ಥೆಯ ಅರ್ಥಶಾಸ್ತ್ರ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯು (ಯುಎನ್‌ಡಿಇಎಸ್‌ಎ) ತಿಳಿಸಿದೆ.

ADVERTISEMENT

1955ರಲ್ಲಿ ಜನಿಸಿದ್ದ ಜಯಂತಿ ಅವರು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ ಹಾಗೂ ಎಂ.ಫಿಲ್‌ ವ್ಯಾಸಂಗ ಮಾಡಿದ್ದರು. ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮುಗಿಸಿದ್ದರು.

ಜಗತ್ತು ಪ್ರಸ್ತುತ ಎದುರಿಸುತ್ತಿರುವ ಹಾಗೂ ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಎದುರಿಸಬೇಕಾದ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಈ ಮಂಡಳಿಯು ಸಲಹೆಗಳನ್ನು ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.