ADVERTISEMENT

ಬೈಡನ್‌ ಆಡಳಿತಕ್ಕೆ ಮತ್ತೆ 20 ಮಂದಿ ಭಾರತ ಮೂಲದ ಅಮೆರಿಕನ್ನರ ನೇಮಕ

ಪಿಟಿಐ
Published 17 ಜನವರಿ 2021, 5:52 IST
Last Updated 17 ಜನವರಿ 2021, 5:52 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಜೋ ಬೈಡನ್‌ ಅವರು, ತಮ್ಮ ಹೊಸ ಆಡಳಿತಕ್ಕೆ ಮತ್ತೆ 20 ಮಂದಿ ಭಾರತ ಮೂಲದ ಅಮೆರಿಕನ್ನ‌ರನ್ನು ಸೇರಿಸಿಕೊಂಡಿದ್ದಾರೆ.

ಪ್ರಮುಖ ಹುದ್ದೆಗಳಿಗೆ ಇವರೆಲ್ಲರನ್ನೂ ನೇಮಿಸಿಕೊಳ್ಳಲಾಗಿದ್ದು, ಇವರಲ್ಲಿ 13 ಮಂದಿ ಮಹಿಳೆಯರಿದ್ದಾರೆ. ಜತೆಗೆ, 20ರಲ್ಲಿ 17 ಮಂದಿ ಶ್ವೇತಭವನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 1ರಷ್ಟು ಇರುವ ಭಾರತ–ಅಮೆರಿಕನ್ನರು ಹೊಸ ಆಡಳಿತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಪ್ರಮುಖ ಹುದ್ದೆಗಳನ್ನು ಅಲಂಕರಿಸುವ ಮೂಲಕ ದಾಖಲೆ ಸ್ಥಾಪಿಸಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನವೇ ಇಷ್ಟೊಂದು ಪ್ರಮಾಣದಲ್ಲಿ ಭಾರತ–ಅಮೆರಿಕನ್ನರನ್ನು ನೇಮಿಸಿರುವುದು ಸಹ ವಿಶೇಷವಾಗಿದೆ.

ADVERTISEMENT

ವನೀತಾ ಗುಪ್ತಾ ಅವರನ್ನು ನ್ಯಾಯಾಂಗ ಇಲಾಖೆಯ ಅಸೋಸಿಯೇಟ್‌ ಅಟಾರ್ನಿ ಜನರಲ್‌ ಆಗಿ ನೇಮಿಸಲಾಗಿದೆ. ಉಜ್ರಾ ಝೇಯಾ ಅವರನ್ನು ವಿದೇಶಾಂಗ ಇಲಾಖೆಯ ನಾಗರಿಕ ಭದ್ರತೆ ಮತ್ತು ಮಾನವ ಹಕ್ಕುಗಳ ವಿಭಾಗಕ್ಕೆ ನೇಮಿಸಲಾಗಿದೆ.

ಮಾಲಾ ಅಡಿಗ ಅವರನ್ನು ಅಮೆರಿಕದ ಮೊದಲ ಮಹಿಳೆಯಾಗಲಿರುವ ಡಾ. ಜಿಲ್‌ ಬೈಡನ್‌ ಅವರಿಗೆ ನೀತಿ ನಿರ್ದೇಶಕರನ್ನಾಗಿ ಹಾಗೂ ಗರಿಮಾ ವರ್ಮಾ ಅವರನ್ನು ಡಿಜಿಟಲ್‌ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಈಗಾಗಲೇ ನೀರಾ ಟಂಡನ್‌ ಅವರನ್ನು ಶ್ವೇತ ಭವನ ಕಚೇರಿ ನಿರ್ವಹಣೆ ಮತ್ತು ಬಜೆಟ್‌ನ ನಿರ್ದೇಶಕರನ್ನಾಗಿ ಮತ್ತು ಡಾ. ವಿವೇಕ್‌ ಮೂರ್ತಿ ಅವರನ್ನು ಅಮೆರಿಕದ ಸರ್ಜನ್‌ ಜನರಲ್‌ ಆಗಿ ನೇಮಿಸಲಾಗಿದೆ.

‘ಭಾರತ–ಅಮೆರಿಕನ್‌ ಸಮುದಾಯ ಸಾರ್ವಜನಿಕ ಸೇವೆಯಲ್ಲಿ ಸದಾ ಸಮರ್ಪಣಾ ಮನೋಭಾವ ಪ್ರದರ್ಶಿಸಿದೆ. ಹೀಗಾಗಿಯೇ, ಹೊಸ ಆಡಳಿತ ಇವರನ್ನು ಗುರುತಿಸಿ ಆಡಳಿತದಲ್ಲಿ ಅವಕಾಶ ಕಲ್ಪಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಿಸಿರುವುದು ಶ್ಲಾಘನೀಯ’ ಎಂದು ಭಾರತೀಯ ವಲಸೆಗಾರ ಸಂಘಟನೆಯ ಸಂಸ್ಥಾಪಕ ಎಂ.ಆರ್‌. ರಂಗಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.