ಕರ್ನಾಟಕ ಮೂಲಕ ಚಂದ್ರಮೌಳಿ ನಾಗಮಲ್ಲಯ್ಯ ಹಾಗೂ ಯೊರ್ದನಿಸ್ ಕೊಬೊಸ್–ಮಾರ್ಟಿನೇಜ್
ಕೃಪೆ: ಎಕ್ಸ್
ಹೂಸ್ಟನ್: ಭಾರತ ಮೂಲದ ವ್ಯಕ್ತಿಯನ್ನು ಅವರ ಪತ್ನಿ ಹಾಗೂ ಮಗನ ಎದುರೇ ತಲೆ ಕತ್ತರಿಸಿ ಕೊಲೆ ಮಾಡಿರುವ ಘಟನೆ ಟೆಕ್ಸಾಸ್‌ನಲ್ಲಿ ನಡೆದಿದೆ. ವಾಷಿಂಗ್ ಮಷಿನ್ ವಿಚಾರಕ್ಕೆ ನಡೆದ ಜಗಳವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಡಲ್ಲಾಸ್‌ನ ಡೌನ್‌ಟೌನ್ ಸ್ಯೂಟಿಸ್ ಮೋಟೆಲ್‌ನಲ್ಲಿ ಬುಧವಾರ ಬೆಳಿಗ್ಗೆ ಪ್ರಕರಣ ನಡೆದಿದೆ.
ಕೊಲೆಯಾದವರನ್ನು ಕರ್ನಾಟಕ ಮೂಲಕ ಚಂದ್ರಮೌಳಿ ನಾಗಮಲ್ಲಯ್ಯ (50) ಎಂದು ಗುರುತಿಸಲಾಗಿದೆ. ಅವರ ಸಹೋದ್ಯೋಗಿಯಾಗಿದ್ದ ಆರೋಪಿ ಯೊರ್ದನಿಸ್ ಕೊಬೊಸ್–ಮಾರ್ಟಿನೇಜ್ (37) ಎಂಬಾತನನ್ನು ಬಂಧಿಸಲಾಗಿದೆ.
ಮ್ಯಾನೇಜರ್ ಆಗಿದ್ದ ನಾಗಮಲ್ಲಯ್ಯ ಹಾಗೂ ಮಾರ್ಟಿನೇಜ್ ನಡುವೆ ವಾಷಿಂಗ್ ಮಷಿನ್‌ಗೆ ಹಾನಿಯಾದ ವಿಚಾರಕ್ಕೆ ಜಗಳವಾಗಿತ್ತು ಎಂದು ಡಲ್ಲಾಸ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಗಳದ ಸಂದರ್ಭದಲ್ಲಿ ನಾಗಮಲ್ಲಯ್ಯ ಅವರು ನೇರವಾಗಿ ಮಾರ್ಟಿನೇಜ್ ಜೊತೆ ಮಾತನಾಡದೆ, ತಮ್ಮ ಹೇಳಿಕೆಯನ್ನು ಅನುವಾದಿಸಿ ಹೇಳುವಂತೆ ಮತ್ತೊಬ್ಬರಿಗೆ ಹೇಳಿದ್ದರು. ಇದರಿಂದ ಕೆರಳಿದ ಆರೋಪಿ, ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ಮಾರ್ಟಿನೇಜ್ ಕತ್ತಿಯಿಂದ ದಾಳಿಗೆ ಮುಂದಾಗುತ್ತಿದ್ದಂತೆ, ನಾಗಮಲ್ಲಯ್ಯ ಅವರು ತಮ್ಮ ಪತ್ನಿ ಹಾಗೂ 18 ವರ್ಷದ ಮಗ ಇದ್ದ ಮೋಟೆಲ್ ಕಚೇರಿಯತ್ತ ಓಡಿದ್ದಾರೆ. ಆದರೂ, ಆರೋಪಿ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಪ್ರಕರಣದ ಕೆಲವು ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ರಸ್ತೆಯಲ್ಲಿ ಬಿದ್ದ ತಲೆಯನ್ನು ಆರೋಪಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕಳ್ಳತನ, ಹಲ್ಲೆ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಹೊಂದಿರುವ ಮಾರ್ಟಿನೇಜ್‌ನನ್ನು ಕೂಡಲೇ ಬಂಧಿಸಲಾಗಿದೆ.
ಆರೋಪ ಸಾಬೀತಾದರೆ, ಜೀವಾವಧಿ ಇಲ್ಲವೇ ಮರಣದಂಡನೆ ಶಿಕ್ಷೆ ಎದುರಾಗಲಿದೆ.
ಸ್ನೇಹಿತರು ಮತ್ತು ಕುಟುಂಬದವರ ಪ್ರೀತಿಯ 'ಬಾಬ್' ಆಗಿದ್ದ ನಾಗಮಲ್ಲಯ್ಯ ಹತ್ಯೆಯನ್ನು ಹ್ಯೂಸ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಂಡಿಸಿದೆ. ನಾಗಮಲ್ಲಯ್ಯ ಅವರ ಕುಟುಂಬದೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದೆ.
'ಊಹಿಸಿಕೊಳ್ಳುವುದಕ್ಕೇ ಅಸಾಧ್ಯವಾದ ದುರಂತವಿದು. ತುಂಬಾ ಆಘಾತವನ್ನುಂಟು ಮಾಡಿದೆ' ಎಂದು ಬಾಬ್ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.