ADVERTISEMENT

ರಾಜ 3ನೇ ಚಾರ್ಲ್ಸ್‌ಗೆ ಮೇ 6ಕ್ಕೆ ಪಟ್ಟಾಭಿಷೇಕ

ಪಿಟಿಐ
Published 10 ಏಪ್ರಿಲ್ 2023, 14:32 IST
Last Updated 10 ಏಪ್ರಿಲ್ 2023, 14:32 IST
   

ಲಂಡನ್‌: ಹವಾನಿಯಂತ್ರಿತ ಸಾರೋಟು, ರಾಜಮನೆತನದ ಐತಿಹಾಸಿಕ ಆಭರಣಗಳು, ಸಾಮಾಜಿಕ ಜಾಲತಾಣಗಳಿಗಾಗಿಯೇ ಸಿದ್ಧಪಡಿಸಿರುವ ಇಮೋಜಿ– ಇವು ಮೇ 6ರಂದು ನಡೆಯಲಿರುವ ರಾಜ ಮೂರನೇ ಚಾರ್ಲ್ಸ್‌ ಹಾಗೂ ರಾಣಿ ಕೆಮೇಲಿಯಾ ಅವರ ಪಟ್ಟಾಭಿಷೇಕದ ಕುರಿತು ಬಕಿಂಗ್‌ಹ್ಯಾಮ್‌ ಅರಮನೆ ಸೋಮವಾರ ಬಿಡುಗಡೆ ಮಾಡಿರುವ ವಿವರಗಳು.

ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಅಬೇ ಚರ್ಚ್‌ನಲ್ಲಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಚಾರ್ಲ್ಸ್‌ ಅವರ ತಾಯಿ, ರಾಣಿ ಎರಡನೇ ಎಲಿಜಬೆತ್‌ ಅವರಿಗೆ 1953ರಲ್ಲಿ ಪಟ್ಟಾಭಿಷೇಕ ನಡೆದಿತ್ತು. ಅದಾದ ಬಳಿಕ ಒರೋಬ್ಬರಿ 70 ವರ್ಷದ ಬಳಿಕ ಇಂಥ ಸಮಾರಂಭವನ್ನು ಜಗತ್ತು ಮತ್ತೊಮ್ಮೆ ಕಣ್ತುಂಬಿಕೊಳ್ಳಲಿದೆ. ಕಳೆದ ವರ್ಷದ ಸೆ‍ಪ್ಟೆಂಬರ್‌ನಲ್ಲಿ ರಾಣಿ ಎರಡನೇ ಎಲಿಜಬತ್‌ ಮೃತಪಟ್ಟಿದ್ದರು.

‘ಮೇ 6ರಂದು ರಾಜ ಮೂರನೇ ಚಾರ್ಲ್ಸ್‌ ಹಾಗೂ ಅವರ ಪತ್ನಿ ಕೆಮೇಲಿಯಾ ಅವರು ರಾಜ ಮೆರವಣಿಗೆಯಲ್ಲಿ ಬಕಿಂಗ್‌ಹ್ಯಾಮ್‌ ಅರಮನೆಯಿಂದ ವೆಸ್ಟ್‌ಮಿನ್‌ಸ್ಟರ್‌ ಅಬೇ ಚರ್ಚ್‌ಗೆ ಬರಲಿದ್ದಾರೆ’ ಎಂದು ಅರಮನೆ ಪ್ರಕಟಣೆ ತಿಳಿಸಿದೆ.

ADVERTISEMENT

ಸೇಂಟ್‌ ಎಡ್ವರ್ಡ್‌ ಕಿರೀಟವನ್ನು ಹೋಲುವ ಇಮೋಜಿಯನ್ನು ಅರಮನೆ ಬಿಡುಗಡೆ ಮಾಡಿದೆ. ಟ್ವಿಟ್ಟರ್‌ನಲ್ಲಿ ಇದೇ ಇಮೋಜಿಯನ್ನು ಬಳಸಿ ಹ್ಯಾಷ್‌ಟ್ಯಾಗ್‌ ಸಿದ್ಧಪಡಿಸಲಾಗಿದೆ.

ಪಟ್ಟಾಭಿಷೇಕ ಸಮಾರಂಭಕ್ಕೆ ಭಾರತ ಮೂಲದ ಬಾಣಸಿಗರಾದ ಹಾಗೂ ಬ್ರಿಟಿಷ್‌ ಎಂಪೈರ್‌ ಮೆಡಲ್‌ನ ವಿಜೇತೆಯಾದ ಮಂಜು ಮಾಲ್ಹಿ ಅವರನ್ನು ಆಹ್ವಾನಿಸಲಾಗಿದೆ. ಸಮಾರಂಭಕ್ಕೆ ಸುಮಾರು ಎರಡು ಸಾವಿರ ಮಂದಿಯನ್ನು ಅರಮನೆ ಆಹ್ವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.