
ಉಗ್ರರು
ಪೇಶಾವರ್: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆಸಿದ ಹಲವು ಕಾರ್ಯಾಚರಣೆಯಲ್ಲಿ ತೆಹ್ರಿಕ್–ಎ–ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಗುಂಪಿಗೆ ಸೇರಿದ ಕನಿಷ್ಠ 17 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪ್ರದೇಶದಲ್ಲಿ ಉಗ್ರಗಾಮಿಗಳು ಇದ್ದಾರೆ ಎನ್ನುವ ಮಾಹಿತಿ ಆಧರಿಸಿ ಬನ್ನು ಜಿಲ್ಲೆಯ ಶರಿಖೆಲ್ ಹಾಗೂ ಪಕ್ಕಾ ಪಹರ್ ಖೇಲ್ ಪ್ರದೇಶದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿವೆ ಎಂದು ಅವರು ಹೇಳಿದ್ದಾರೆ.
ಲಕ್ಕಿ ಪೊಲೀಸ್, ಬನ್ನು ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಹಾಗೂ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 10 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಐವರು ಗಾಯಗೊಂಡಿದ್ದಾರೆ, ಓರ್ವನನ್ನು ಬಂಧಿಸಲಾಗಿದೆ ಎಂದು ಖೈಬರ್ ಪಖ್ತುಂಖ್ವಾದ ಪೊಲೀಸ್ ಮಹಾ ನಿರ್ದೇಶಕ ಝುಲ್ಫಿಕರ್ ಹಮೀದ್ ತಿಳಿಸಿದ್ದಾರೆ.
ಹತ್ಯೆಗೈಯಲಾದ ಏಳು ಮಂದಿಯ ಮೃತದೇಹವವನ್ನು ಹೊರತೆಗೆಯಲಾಗಿದೆ. ಬೆಟ್ಟದ ದುರ್ಗಮ ಹಾದಿ ಇದ್ದಿದ್ದರಿಂದ ಮೂವರ ಮೃತದೇಹ ಹೊರತೆಗೆಯಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಬನ್ನು ಪೊಲೀಸ್, ಸಿಟಿಡಿ ಹಾಗೂ ಭದ್ರತಾ ಪಡೆಗಳು ನಡೆಸಿದ್ದ 8 ಗಂಟೆಯ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 7 ಉಗ್ರಗಾಮಿಗಳನ್ನು ಕೊಲ್ಲಲಾಗಿದೆ. ಹಲವರು ಗಾಯಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ದೊಡ್ಡ ತಂಡ ಭಾಗವಹಿಸಿದ್ದು, ಯಾರಿಗೂ ಗಾಯಗಳಾಗಿಲ್ಲ. ಸ್ಥಳೀಯ ನಿವಾಸಿಗಳು ಸಂಪೂರ್ಣ ಸಹಕಾರ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಗೊಳಗಾದ ಉಗ್ರರಿಂದ ಗಣನೀಯ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಮೀದ್ ಹೇಳಿದರು.
ಇದರ ಜೊತೆಗೆ, ಬನ್ನುವಿನ ಆಬ್ಸರ್ ಚೌಕ್‌ನಲ್ಲಿ ತುಪ್ಪದ ಟಿನ್‌ನಲ್ಲಿ ಇರಿಸಲಾಗಿದ್ದ 10 ಕೆ.ಜಿ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದರಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.