ADVERTISEMENT

ಕೋವಿಡ್–19 ನಿರ್ವಹಣೆ: ‘ಟ್ರಂಪ್ ಸರ್ಕಾರದ ಪ್ರಾಮಾಣಿಕತೆ ಕೊರತೆಯಿಂದ ಪ್ರಾಣ ಹಾನಿ’

ಏಜೆನ್ಸೀಸ್
Published 23 ಜನವರಿ 2021, 7:44 IST
Last Updated 23 ಜನವರಿ 2021, 7:44 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್:ಕೋವಿಡ್–19 ನಿರ್ವಹಣೆ ವಿಚಾರದಲ್ಲಿ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಸತ್ಯಾಂಶದ ಕೊರತೆಯು ದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಅಮೆರಿಕ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ಹೇಳಿದ್ದಾರೆ.

ಕಳೆದ ವರ್ಷ ಪ್ರಾಮಾಣಿಕತೆ ಮತ್ತು ಸತ್ಯಾಂಶದ ಕೊರತೆಯಿಂದಾಗಿ ದೇಶದಲ್ಲಿ ನಾಲ್ಕು ಲಕ್ಷಕ್ಕಿಂತ ಹೆಚ್ಚು ಸಾವು ಸಂಭವಿಸಿತೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು, ‘ನಿಮಗೆ ತಿಳಿದಿದೆ. ಬಹುಶಃ ಹಾಗಾಗಿರಬಹುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಶೇಷವಾಗಿ ಬಿಕಟ್ಟಿನ ಸನ್ನಿವೇಶಗಳಲ್ಲಿ ನೀವು ವೈದ್ಯಕೀಯವಾಗಿ ಮತ್ತು ವೈಜ್ಞಾನಿಕವಾಗಿ ಯಾವುದೇ ಅರ್ಥವಿಲ್ಲದ ಮಾತುಗಳನ್ನು ಆಡುವುದರಿಂದ ಅದು ಯಾವುದೇ ರೀತಿಯಲ್ಲಿ ಸ್ಪಷ್ಟವಾಗಿ ನೆರವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.ಆ ಮೂಲಕ ಪರೋಕ್ಷವಾಗಿ ಟ್ರಂಪ್‌ಗೆ ಕುಟುಕಿದ್ದಾರೆ.

ADVERTISEMENT

‘ವಿಚಾರಗಳು ತಪ್ಪಾಗಿದ್ದರೆ, ಬೇರೆಯವರತ್ತ ಬೆರಳು ತೋರಿಸದೆ ಅವುಗಳನ್ನು ಸರಿಪಡಿಸಬೇಕು. ನಾವು ವಿಜ್ಞಾನ ಮತ್ತು ಪುರಾವೆಗಳ ಆಧಾರದ ಮೇಲೆ ಎಲ್ಲವನ್ನೂ ಮಾಡಬೇಕು’ ಎಂದು ತಿಳಿಸಿದ್ದಾರೆ.

ಬೈಡನ್‌ ಸರ್ಕಾರವು ಕೋವಿಡ್–19 ಸಾಂಕ್ರಾಮಿಕವನ್ನು ನಿರ್ವಹಿಸುವ ವಿಚಾರದಲ್ಲಿ ಅಮೆರಿಕದ ಜನರೊಂದಿಗೆ ಸಂಪೂರ್ಣ ಪಾರದರ್ಶಕ, ಮುಕ್ತ ಹಾಗೂ ಪ್ರಾಮಣಿಕವಾಗಿರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.‘ಇದೀಗ ನಿಮಗೆ ತಿಳಿದಿರುವ ವಿಚಾರವನ್ನು, ಪುರಾವೆಗಳನ್ನು, ವಿಜ್ಞಾನದ ಬಗ್ಗೆ ಯಾವುದೇ ಪರಿಣಾಮದ ಭಯವಿಲ್ಲದೆ ಮಾತನಾಡಲು ಮುಕ್ತವಾತಾವರಣವಿದೆ’ ಎಂದೂಅವರು ಹೇಳಿದ್ದಾರೆ.

ಅತಿಹೆಚ್ಚು (2.53 ಕೋಟಿ) ಕೋವಿಡ್–19 ಸೋಂಕು ಪ್ರಕರಣಗಳು ವರದಿಯಾಗಿರುವ ಅಮೆರಿದಲ್ಲಿ ಈವರೆಗೆ 1.52 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 4.24 ಲಕ್ಷಕ್ಕೇರಿದೆ. ಇನ್ನೂ 97 ಲಕ್ಷ ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.