ADVERTISEMENT

ಇರಾನ್‌ನ ತೈಲ ಘಟಕ, ರಕ್ಷಣಾ ಕೇಂದ್ರಗಳ ಗುರಿಯಾಗಿಸಿ ಇಸ್ರೇಲ್‌ ದಾಳಿ

ಎರಡು ಕಡೆಗಳಲ್ಲಿ ಮುಂದುವರಿದ ಕ್ಷಿಪಣಿ ದಾಳಿ; ಮೂರನೇ ದಿನಕ್ಕೆ ಕಾಲಿಟ್ಟ ಇರಾನ್‌–ಇಸ್ರೇಲ್ ಯುದ್ಧ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 16:21 IST
Last Updated 15 ಜೂನ್ 2025, 16:21 IST
<div class="paragraphs"><p>ಇರಾನ್‌ನ ಟೆಹರಾನ್‌ನಲ್ಲಿರುವ ತೈಲ ಸಂಸ್ಕರಣಾ ಘಟಕದ ಮೇಲೆ ಇಸ್ರೇಲ್‌ ಭಾನುವಾರ ದಾಳಿ ನಡೆಸಿದ ಬಳಿಕ ದಟ್ಟವಾದ ಹೊಗೆ ಆವರಿಸಿತ್ತು.</p></div>

ಇರಾನ್‌ನ ಟೆಹರಾನ್‌ನಲ್ಲಿರುವ ತೈಲ ಸಂಸ್ಕರಣಾ ಘಟಕದ ಮೇಲೆ ಇಸ್ರೇಲ್‌ ಭಾನುವಾರ ದಾಳಿ ನಡೆಸಿದ ಬಳಿಕ ದಟ್ಟವಾದ ಹೊಗೆ ಆವರಿಸಿತ್ತು.

   

ಪಿಟಿಐ ಚಿತ್ರ

ಜೆರುಸಲೇಂ: ಇರಾನ್‌ ಮೇಲೆ ಇಸ್ರೇಲ್‌ ಭಾನುವಾರ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸಿದ್ದು, ರಕ್ಷಣಾ ಕೇಂದ್ರಗಳು, ತೈಲ ಘಟಕಗಳನ್ನು ಗುರಿಯಾಗಿರಿಸಿಕೊಂಡೇ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ, ರಾತ್ರಿಯಿಡೀ ಇರಾನ್‌ ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್‌ನ 10 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. 

ADVERTISEMENT

ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ‘ಇರಾನ್‌ ಪಾಲಿಗೆ ಕೆಟ್ಟದ್ದು ಇನ್ನಷ್ಟೇ ಬರಲಿದೆ’ ಎಂದು ಇಸ್ರೇಲ್‌ ಎಚ್ಚರಿಸಿದೆ.

ಇರಾನ್‌ನ ಪರಮಾಣು ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಿ, ಟೆಹರಾನ್‌ನಲ್ಲಿರುವ ಇರಾನ್‌ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮೇಲೆ ಇಸ್ರೇಲ್‌ ಭಾನುವಾರ ಕ್ಷಿಪಣಿ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಇರಾನ್‌ನ ಕ್ಷಿಪಣಿಗಳು, ಇಸ್ರೇಲ್‌ ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಅಲ್ಲಿನ ಹಲವು ಕಟ್ಟಡಗಳನ್ನು ನಾಶಗೊಳಿಸಿವೆ.

ಟೆಹರಾನ್‌ನಲ್ಲಿ ಸ್ಫೋಟ:

‘ಇರಾನ್‌ನ ತೈಲ ಹಾಗೂ ನೈಸರ್ಗಿಕ ಅನಿಲ ಉದ್ಯಮಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್‌ ಮೊದಲ ಬಾರಿಗೆ ಡ್ರೋನ್‌ ದಾಳಿ ನಡೆಸಿದ್ದರಿಂದ ಭಾರಿ ಸ್ಫೋಟ ಸಂಭವಿಸಿದೆ’ ಎಂದು ಇರಾನ್‌ನ ಸುದ್ದಿಸಂಸ್ಥೆಗಳು ವರದಿ ಮಾಡಿವೆ. 

ತಕ್ಷಣವೇ ಎರಡು ರಾಷ್ಟ್ರಗಳು ಸಂಘರ್ಷ ಕೊನೆಗಾಣಿಸಲು ಮುಂದಾಗಬೇಕು ಎಂದು ವಿಶ್ವದ ಪ್ರಮುಖ ನಾಯಕರು ಒತ್ತಾಯಿಸಿದ್ದಾರೆ.

ಇಸ್ರೇಲ್‌-ಸಾವಿನ ಸಂಖ್ಯೆ 13ಕ್ಕೆ ಏರಿಕೆ: ‘ಟೆಲ್‌ ಅವೀವ್‌ ಸೇರಿದಂತೆ ವಿವಿಧ ನಗರಗಳನ್ನು ಗುರಿಯಾಗಿರಿಸಿಕೊಂಡು ಇರಾನ್‌ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾನುವಾರ ಒಂದೇ ದಿನ 10 ಮಂದಿ ಮೃತಪಟ್ಟಿದ್ದಾರೆ’ ಎಂದು ಇಸ್ರೇಲ್‌ ರಕ್ಷಣಾ ಸೇವಾ ವಿಭಾಗ ‘ಮ್ಯಾಗನ್‌ ಡೇವಿಡ್‌ ಆ್ಯಡಂ’ ತಿಳಿಸಿದೆ.

‘ಟೆಲ್‌ ಅವೀವ್‌ ಸಮೀಪದ ಬ್ಯಾಟ್‌ ಯಾಮ್‌ನ ಅಪಾರ್ಟ್‌ಮೆಂಟ್‌ ಮೇಲೆ ಅಪ್ಪಳಿಸಿದ ಕ್ಷಿಪಣಿ ದಾಳಿಯಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 180 ಮಂದಿಗೆ ಗಾಯಗಳಾಗಿದ್ದು, 7 ಮಂದಿ ಕಣ್ಮರೆಯಾಗಿದ್ದಾರೆ’ ಎಂದು ಸ್ಥಳೀಯ ಪೊಲೀಸ್‌ ಕಮಾಂಡರ್‌ ಡೇನಿಯಲ್‌ ಹಡಾಡ್‌ ತಿಳಿಸಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಯಾವುದೇ ಉದ್ದೇಶ ಇರಾನ್‌ ಹೊಂದಿಲ್ಲ. ನೈಸರ್ಗಿಕವಾಗಿ ದೇಶದ ಹಕ್ಕು ಕಸಿದುಕೊಳ್ಳುವ ಒಪ್ಪಂದಕ್ಕೆ ನಾವು ಒಪ್ಪುವುದಿಲ್ಲ..
ಅಬ್ಬಾಸ್‌ ಅರಾಛಿ, ಇರಾನ್‌ನ ವಿದೇಶಾಂಗ ಸಚಿವ

ಉತ್ತರ ಇಸ್ರೇಲ್‌ನ ತಮ್ರಾ ಪಟ್ಟಣದ ಕಟ್ಟಡದ ಮೇಲೆ ಕ್ಷಿಪಣಿ ದಾಳಿಯಿಂದ ನಾಲ್ಕು ಮಂದಿ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ. 

ಪರಮಾಣು ಮಾತುಕತೆ ಬಂದ್‌: ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ನಿಗದಿಯಾಗಿದ್ದ ಸಭೆಯು ರದ್ದುಗೊಂಡಿದೆ.

ಅಮೆರಿಕ ಹಾಗೂ ಇರಾನ್‌ನ ನಡುವೆ 6ನೇ ಸುತ್ತಿನ ಪರೋಕ್ಷ ಮಾತುಕತೆಯು ಭಾನುವಾರ ಒಮನ್‌ನಲ್ಲಿ ನಡೆಯಬೇಕಿತ್ತು. 

ಇಸ್ರೇಲ್ ಪಡೆಗಳು ಭವಿಷ್ಯದಲ್ಲಿ ನಡೆಸುವ ದಾಳಿಗೆ ಹೋಲಿಸಿದರೆ ಇರಾನ್‌ ಮೇಲೆ ಇದುವರೆಗಿನ ದಾಳಿ  ಏನೂ ಅಲ್ಲ
ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಪ್ರಧಾನಿ

ಇರಾನ್‌ಗೆ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ

‘ಇರಾನ್‌ ಮೇಲಿನ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಪ್ರತೀಕಾರದ ಕ್ರಮವಾಗಿ ಅಮೆರಿಕದ ಮೇಲೆ ಇರಾನ್‌ ದಾಳಿ ನಡೆಸಿದರೆ ತಕ್ಕ ಶಾಸ್ತಿ ಮಾಡಲಾಗುವುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ‘ಇರಾನ್‌ ಯಾವುದೇ ಮಾದರಿಯಲ್ಲಿ ನಮ್ಮ ಮೇಲೆ ದಾಳಿ ನಡೆಸಿದರೆ ಅಮೆರಿಕದ ಇಡೀ ಸೇನೆಯ ಸಂಪೂರ್ಣ ಶಕ್ತಿಯೊಂದಿಗೆ ‍ಪ್ರತ್ಯುತ್ತರ ನೀಡಲಿದೆ. ಹಿಂದೆಂದೂ ಇಂತಹ ದಾಳಿ ನಡೆದಿರಬಾರದು. ರಕ್ತಸಿಕ್ತ ಸಂಘರ್ಷವನ್ನು ಕೊನೆಗಾಣಿಸಲು ಇರಾನ್‌ ಹಾಗೂ ಇಸ್ರೇಲ್‌ ಸುಲಭವಾಗಿ ಒಪ್ಪಂದ ಮಾಡಿಕೊಳ್ಳಬಹುದು’ ಎಂದು ಟ್ರಂಪ್‌ ಅವರು ‘ಟ್ರೂಥ್‌’ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. 

ಇಸ್ರೇಲ್‌ ವಾಯುಮಾರ್ಗ ಬಂದ್‌

ಇಸ್ರೇಲ್‌ನ ವಾಯುಮಾರ್ಗ ಹಾಗೂ ಬೆನ್‌ ಗುರಿಯಾನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾನುವಾರವೂ ಮುಚ್ಚಲಾಗಿತ್ತು. ನಿಲ್ದಾಣದಿಂದ ಯಾವುದೇ ವಿಮಾನಗಳು ಹಾರಾಟ ನಡೆಸಿಲ್ಲ. ‘ಹೊರದೇಶಗಳಲ್ಲಿ ಸಿಲುಕಿರುವ ಇಸ್ರೇಲ್‌ ನಾಗರಿಕರನ್ನು ಕರೆತರಲು ಇಸ್ರೇಲ್‌ ವಿಮಾನಯಾನ ಸಂಸ್ಥೆಗಳು ಕೆಲಸ ಮಾಡುತ್ತಿದೆ’ ಎಂದು ಸರ್ಕಾರ ತಿಳಿಸಿದೆ. ಜೋರ್ಡಾನ್‌ ಈಜಿಪ್ಟ್‌ನ ಭೂ ಗಡಿಯನ್ನು ಇಸ್ರೇಲ್ ತೆರೆದಿಟ್ಟಿದೆ. 

ಹೈಫಾ ಬಂದರಿಗಿ‌ಲ್ಲ ತೊಂದರೆ:

‘ಇರಾನ್‌ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಯಿಂದ ಉದ್ಯಮಿ ಗೌತಮ್‌ ಅದಾನಿಗೆ ಸೇರಿದ ಇಸ್ರೇಲ್‌ನ ಹೈಫಾ ಬಂದರಿಗೆ ಯಾವುದೇ ಹಾನಿಯಾಗಿಲ್ಲ. ಸರಕು ಸಾಗಣೆ ಕಾರ್ಯಾಚರಣೆಗಳು ಅಡೆತಡೆಯಿಲ್ಲದೇ ಮುಂದುವರಿದಿದೆ’ ಎಂದು ಮೂಲಗಳು ತಿಳಿಸಿವೆ. ಬಂದರಿನ ಸಮೀಪದಲ್ಲಿರುವ ತೈಲ ಸಂಸ್ಕರಣ ಕೇಂದ್ರದ ಮೇಲೆ ಶನಿವಾರ ದಾಳಿ ನಡೆದಿತ್ತು.  ‘ಬಂದರಿನಲ್ಲಿ 8 ಹಡಗುಗಳಿದ್ದು ವಹಿವಾಟು ಎಂದಿನಂತಿದೆ’ ಎಂದು ಮೂಲಗಳು ತಿಳಿಸಿವೆ.

ಭಾರತೀಯ ವಿದ್ಯಾರ್ಥಿಗಳನ್ನು ಕರೆತನ್ನಿ: ಕಾಂಗ್ರೆಸ್‌

ನವದೆಹಲಿ: ‘ಇರಾನ್‌ನಲ್ಲಿ ಸಿಲುಕಿರುವ 1500 ಭಾರತದ ವಿದ್ಯಾರ್ಥಿಗಳನ್ನು ಮರಳಿ ಭಾರತಕ್ಕೆ ಕರೆತರಲು ವಿದೇಶಾಂಗ ಇಲಾಖೆಯು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಇರಾನ್‌ನಲ್ಲಿರುವ ಭಾರತದ ವಿದ್ಯಾರ್ಥಿಗಳು ನೆರವಿಗಾಗಿ ಮನವಿ ಮಾಡುತ್ತಿದ್ದಾರೆ. ಆಕಾಶದಲ್ಲಿ ಕ್ಷಿಪಣಿಗಳ ಸುರಿಮಳೆ ಆಗುತ್ತಿದ್ದರೂ ಸರ್ಕಾರ ಪ್ರತಿಕ್ರಿಯಿಸುತ್ತಿಲ್ಲ’ ಎಂದು ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ತಿಳಿಸಿದ್ದಾರೆ.

‘ವಿಮಾನಗಳು ರದ್ದುಗೊಂಡಿವೆ. ಟೆಹರಾನ್ ವಾಯುಮಾರ್ಗವನ್ನು ಮುಚ್ಚಲಾಗಿದೆ. ಇಂಟರ್‌ನೆಟ್‌ ಸೌಲಭ್ಯ ದೊರೆಯುತ್ತಿಲ್ಲ. 1500 ಭಾರತೀಯ ವಿದ್ಯಾರ್ಥಿಗಳು ಅನಿಶ್ಚಿತತೆಯಲ್ಲಿದ್ದಾರೆ. ತೆರವುಗೊಳಿಸುವ ಸುರಕ್ಷಿತ ವಲಯದ ಯಾವುದೇ ಮಾಹಿತಿಯೂ ಅವರಿಗೆ ಲಭ್ಯವಾಗುತ್ತಿಲ್ಲ’ ಎಂದು ‘ಎಕ್ಸ್‌’ನಲ್ಲಿ ಫೋಸ್ಟ್ ಮಾಡಿದ್ದಾರೆ.

ಅನಗತ್ಯ ಓಡಾಟ ಬೇಡ:

ಈ ಬೆಳವಣಿಗೆ ಬಳಿಕ ಇರಾನ್‌ನ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ. ‘ಜಾಗರೂಕರಾಗಿರಿ ಅನಗತ್ಯವಾಗಿ ಓಡಾಡಬೇಡಿ. ರಾಯಭಾರ ಕಚೇರಿಯ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಸಂದೇಶಗಳನ್ನು ಗಮನಿಸಬೇಕು. ಸ್ಥಳೀಯಾಡಳಿತವು ಪ್ರಕಟಿಸುವ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಬೇಕು’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.