
ಕೈರೊ/ಬೈರೂತ್ (ರಾಯಿಟರ್ಸ್): ಪತ್ರಕರ್ತ ಇಸ್ಸಾಂ ಅಬ್ದುಲ್ಲಾ ಅವರನ್ನು ಇಸ್ರೇಲ್ ಉದ್ದೇಶಪೂರ್ವಕವಾಗಿ ಹತ್ಯೆಗೈದಿದೆ ಎಂದು ಆರೋಪಿಸಿರುವ ಲೆಬನಾನ್ ವಿದೇಶಾಂಗ ಸಚಿವರು, ಈ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅಧಿಕೃತವಾಗಿ ದೂರು ನೀಡುವುದಾಗಿ ಹೇಳಿದ್ದಾರೆ.
‘ಇಸ್ರೇಲ್ ಕೃತ್ಯವು ಅಭಿಪ್ರಾಯ ಹೇಳುವುದರ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಘೋರ ದಾಳಿ ಮತ್ತು ಅಪರಾಧ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಕ್ಷಿಪಣಿಯಿಂದ ಪತ್ರಕರ್ತನ ಸಾವು’: ‘ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ ರಾಯಿಟರ್ಸ್ ಪತ್ರಕರ್ತ ಇಸ್ಸಾಂ ಅಬ್ದುಲ್ಲಾ ಮೃತಪಟ್ಟರು ’ ಎಂದು ಲೆಬನಾನ್ ಸೇನೆಯು ತನ್ನ ವೆಬ್‌ಸೈಟ್‌ನಲ್ಲಿ ಶನಿವಾರ ಪ್ರಕಟಿಸಿದೆ.
ದಾಳಿ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಪತ್ರಕರ್ತರು ಕಾರಿನಲ್ಲಿದ್ದರು.
‘ಪತ್ರಕರ್ತನ ಸಾವಿಗೆ ವಿಷಾದಿಸುತ್ತೇವೆ. ಇದು ದುರದೃಷ್ಟಕರ ಘಟನೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ರಿಚರ್ಡ್ ಹೆಚ್ಟ್ ಅವರು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಸಾವಿಗೆ ಇಸ್ರೇಲ್ ಸೇನೆ ಕಾರಣವೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ದಕ್ಷಿಣ ಲೆಬನಾನ್ ಗಡಿಯಲ್ಲಿ ಇಸ್ರೇಲ್ ಸೇನೆ ಮತ್ತು ಲೆಬನಾನ್ ಬಂಡುಕೋರರ ನಡುವೆ ನಡೆಯುತ್ತಿರುವ ಕದನದ ವರದಿ ಮಾಡಲು ಅಂತರರಾಷ್ಟ್ರೀಯ ಪತ್ರಕರ್ತರ ಗುಂಪು ಅಲ್ಮಾ–ಅಲ್– ಶಾಬ್ ಎಂಬ ಗ್ರಾಮಕ್ಕೆ ತೆರಳಿತ್ತು. ಈ ವೇಳೆ ನಡೆದ ಕ್ಷಿಪಣಿ ದಾಳಿ ನಡೆದಿದೆ.
ದಾಳಿಯಲ್ಲಿ ತನ್ನ ಸಂಸ್ಥೆಯ ಇನ್ನಿಬ್ಬರು ಪತ್ರಕರ್ತರು ಗಾಯಗೊಂಡಿರುವುದಾಗಿ ರಾಯಿಟರ್ಸ್ ಹೇಳಿದೆ. ಅಲ್– ಜಝೀರಾ ವಾಹಿನಿಯ ವರದಿಗಾರ ಮತ್ತು ವಿಡಿಯೊಗ್ರಾಫರ್ ಕೂಡ ಗಾಯಗೊಂಡಿದ್ದಾರೆ ಎಂದು ಅಲ್ ಜಝೀರಾ ಹೇಳಿದೆ. ಎಎಫ್‌ಪಿಯ ಇಬ್ಬರು ಪತ್ರಕರ್ತರು ಮೃತಪಟ್ಟಿರುವುದಾಗಿ ಸುದ್ದಿಸಂಸ್ಥೆ ತಿಳಿಸಿದೆ.
ಇಸ್ಸಾಂ ಅಂತ್ಯಕ್ರಿಯೆ: ಇಸ್ಸಾಂ ಅಬ್ದುಲ್ಲಾ ಅವರ ಅಂತಿಮ ಸಂಸ್ಕಾರವನ್ನು ದಕ್ಷಿಣ ಲೆಬನಾನ್‌ನ ಖಿಯಾಮ್ ಪಟ್ಟಣದಲ್ಲಿ ಶನಿವಾರ ನೆರವೇರಿಸಲಾಯಿತು.
ಅದಕ್ಕೂ ಮೊದಲು, ಅವರ ಮೃತದೇಹಕ್ಕೆ ಲೆಬನಾನ್ ಧ್ವಜ ಹೊದಿಸಿ, ಖಿಯಾಮ್ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ನೂರಾರು ಜನರು ಇಸ್ಸಾಂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹತ್ತಕ್ಕೂ ಹೆಚ್ಚು ಪತ್ರಕರ್ತರು ಮತ್ತು ಲೆಬೆನಾನ್‌ನ ಜನಪ್ರತಿನಿಧಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.