ಸಾವು
ಛತ್ತರಪುರ: ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯ ಬಾಗೇಶ್ವರ ಧಾಮದ ಆವರಣದಲ್ಲಿ ಭಾರಿ ಮಳೆಯಿಂದ ಡೇರೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಇತರ ನಾಲ್ವರಿಗೆ ಗಾಯಗಳಾಗಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಗರ್ಹಾ ಗ್ರಾಮದಲ್ಲಿ ಬೆಳಿಗ್ಗೆ 7:30ರ ಸುಮಾರಿಗೆ ಧಾರಾಕಾರ ಮಳೆಯಿಂದ ಪಾರಾಗಲು ಡೇರೆಯಲ್ಲಿ ಆಶ್ರಯ ಪಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಆಶುತೋಷ್ ಶ್ರೋತಿ ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಛತ್ತರಪುರ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ತಿಳಿಸಿದರು.
ಮೃತರನ್ನು ಉತ್ತರಪ್ರದೇಶದ ಶ್ಯಾಮಲಾಲ್ ಕೌಶಲ್ (50) ಎಂದು ಗುರುತಿಸಲಾಗಿದೆ. ಜನ್ಮದಿನದ ಅಂಗವಾಗಿ ಅವರು ಬಾಗೇಶ್ವರ ಧಾಮದ ಧರ್ಮದರ್ಶಿ ಧೀರೇಂದ್ರ ಶಾಸ್ತ್ರಿ ಅವರ ಆಶೀರ್ವಾದ ಪಡೆಯಲು ಕುಟುಂಬಸ್ಥರೊಂದಿಗೆ ಬಂದಿದ್ದರು ಎಂದು ಶ್ಯಾಮಲಾಲ್ ಅಳಿಯ ರಾಜೇಶ್ ಕೌಶಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.