ADVERTISEMENT

ನಿಕರಾಗುವಾದಲ್ಲಿ ಸ್ಥಳೀಯ ಸಮುದಾಯಗಳ ಮೇಲೆ ದಾಳಿ; 12 ಮಂದಿ ಸಾವು

ಏಜೆನ್ಸೀಸ್
Published 26 ಆಗಸ್ಟ್ 2021, 7:37 IST
Last Updated 26 ಆಗಸ್ಟ್ 2021, 7:37 IST
ಸಾವು– ಸಾಂದರ್ಭಿಕ ಚಿತ್ರ
ಸಾವು– ಸಾಂದರ್ಭಿಕ ಚಿತ್ರ   

ಮನಗುವಾ (ನಿಕರಾಗುವಾ): ‘ಇಲ್ಲಿನ ಕೆರೆಬಿಯನ್‌ ಕರಾವಳಿಯ ಬೋಸವಾಸ್ ನಿಸರ್ಗಧಾಮದಲ್ಲಿ ನೆಲೆಸಿರುವ ಸ್ಥಳೀಯ ಸಮುದಾಯಗಳ ಮೇಲೆ ವಲಸಿಗರು ಮತ್ತೆ ದಾಳಿ ನಡೆಸಿದ್ದಾರೆ. ಇದರಲ್ಲಿ ಮಿಸ್ಕಿಟೊ ಮತ್ತು ಮಯಾಂಗ್ನಾ ಸಮುದಾಯದ 12ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ’ ಎಂದು ಪರಿಸರವಾದಿ ಮತ್ತು ಹೋರಾಟಗಾರರು ಬುಧವಾರ ದೂರಿದ್ದಾರೆ.

ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮರ ಕಡಿಯುವಿಕೆಯಂತಹ ಸಮಸ್ಯೆಗಳೂ ಇವೆ.

‘ವಲಸೆಗಾರರು ಸ್ಥಳೀಯ ನಿವಾಸಿಗಳ ಪ್ರದೇಶದ ಮೇಲೆ ದಾಳಿ ನಡೆಸಿದ್ದಾರೆ. ಇದೊಂದು ಹತ್ಯಾಕಾಂಡ. ಈ ದಾಳಿಯಲ್ಲಿ ಮಿಸ್ಕಿಟೊ ಸಮುದಾಯದ 9 ಮತ್ತು ಮಯಾಂಗ್ನಾನ ಸಮುದಾಯದ ಮೂವರು ಮೃತಪಟ್ಟಿರುವುದಾಗಿ ಸ್ಥಳೀಯರು ದೃಢೀಕರಿಸಿದ್ದಾರೆ’ ಎಂದು ಪರಿಸರವಾದಿ ಅಮರು ರೂಯಿಜ್ ಆರೋಪಿಸಿದ್ದಾರೆ.

ADVERTISEMENT

‘ಸ್ಥಳೀಯ ನಿವಾಸಿಗಳ ಮೇಲೆ ಮಾರಕಾಸ್ತ್ರಗಳು ಮತ್ತು ಬಂದೂಕುಗಳ ಮೂಲಕ ದಾಳಿ ನಡೆಸಲಾಗಿದೆ. ಅವರಿಗೆ ಹಿಂಸೆ ನೀಡಲಾಗಿದೆ. ಅಷ್ಟೇ ಅಲ್ಲದೆ ಅವರ ಮೃತ ದೇಹಗಳನ್ನು ಮರಗಳಿಗೆ ನೇಣು ಹಾಕಲಾಗಿದೆ’ ಎಂದು ಸ್ಥಳೀಯರಿಗೆ ಕಾನೂನು ನೆರವು ಒದಗಿಸುವ ಕೇಂದ್ರವೊಂದು ತಿಳಿಸಿದೆ. ಆದರೆ ಈ ಬಗ್ಗೆ ನಿಕರಾಗುವಾ ಸರ್ಕಾರವು ದೃಢಪಡಿಸಿಲ್ಲ.

ನಾವು ದಾಳಿ ಬಗ್ಗೆ ಪೊಲೀಸರು ಮತ್ತು ಸೇನೆಗೆ ತಿಳಿಸಿದ್ದೆವು. ಆದರೆ ಯಾರು ಪ್ರತಿಕ್ರಿಯಿಸಿಲ್ಲ ಎಂಬುದಾಗಿ ಸ್ಥಳೀಯ ನಿವಾಸಿಯೊಬ್ಬರು ಪ್ರಾದೇಶಿಕ ರೇಡಿಯೊ ಸ್ಟೇಷನ್‌ಗೆ ತಿಳಿಸಿದ್ದಾರೆ.

‘ಅಧ್ಯಕ್ಷ ಡೇನಿಯಲ್‌ ಒರ್ಟೆಗಾ ನೇತೃತ್ವದ ಸರ್ಕಾರವು ಕರಾವಳಿ ಪ್ರದೇಶದ ಜನರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಸ್ಥಳೀಯ ಹೋರಾಟಗಾರರು ದೂರಿದ್ದಾರೆ.

‘ಇದುಈ ವರ್ಷ ಬೋಸವಾಸ್ ಪ್ರದೇಶದಲ್ಲಿ ಸ್ಥಳೀಯ ಗುಂಪುಗಳ ಮೇಲೆ ನಡೆದ ನಾಲ್ಕನೇ ದಾಳಿಯಾಗಿದೆ’ ಎಂದು ಮಾನವ ಹಕ್ಕುಗಳ ವಕೀಲೆ ಮರಿಯಾ ಲೂಯಿಸಾ ಅಕೋಸ್ಟಾ ಮಾಹಿತಿ ನೀಡಿದ್ದಾರೆ.

‘ಜನವರಿಯಿಂದ ಕನಿಷ್ಠ 49 ಸ್ಥಳೀಯ ನಿವಾಸಿಗಳನ್ನು ವಲಸೆಗಾರರು ಹತ್ಯೆ ಮಾಡಿದ್ದಾರೆ. ಅನೇಕರು ಹೆದರಿ, ಅಲ್ಲಿಂದ ಪಲಾಯನ ಮಾಡಿದ್ದಾರೆ’ ಎಂದು ಅಟ್ಲಾಂಟಿಕ್ ಕರಾವಳಿಯಲ್ಲಿರುವ ನ್ಯಾಯ ಮತ್ತು ಮಾನವ ಹಕ್ಕುಗಳ ಕೇಂದ್ರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.