ಕರಾಚಿ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ವಿವಾಹಿತ ಮಹಿಳೆಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಮುಸ್ಲಿಂ ಪುರುಷನೊಂದಿಗೆ ಬಲವಂತವಾಗಿ ವಿವಾಹ ಮಾಡಲಾಗಿದೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಅಪಹರಣಕ್ಕೊಳಗಾದ ಮಹಿಳೆಯ ಕುಟುಂಬವು ಬುಧವಾರ ದಕ್ಷಿಣ ಸಿಂಧ್ ಪ್ರಾಂತ್ಯದ ಮಿರ್ಪುರ್ಖಾಸ್‌ನ ದಿಗ್ರಿ ಪ್ರದೇಶದಲ್ಲಿ ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದೆ.
ಮಹಿಳೆಯ ಪತಿ ಮತ್ತು ಆಕೆಯ ನಾಲ್ವರು ಮಕ್ಕಳು ತಮ್ಮ ಪ್ರಕರಣವನ್ನು ದಾಖಲಿಸಲು ಮಿರ್ಪುರ್ಖಾಸ್‌ನಲ್ಲಿರುವ ದರವಾರ್ ಇತ್ತೆಹಾದ್ ಕಚೇರಿಗೆ ಆಗಮಿಸಿದ್ದರು.
ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳ ಕಲ್ಯಾಣ ಮತ್ತು ಹಕ್ಕುಗಳಿಗಾಗಿ ಹೋರಾಡುವ ಎನ್‌ಜಿಒ ಮುಖ್ಯಸ್ಥ ಶಿವ ಕಾಚಿ, ಮಹಿಳೆಯನ್ನು ಅಪಹರಿಸಿ, ನಂತರ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಶೆಹಬಾಜ್ ಖಾಷ್ಖೇಲಿ ಎಂಬ ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ನಮಗೆ ಸಹಕಾರ ನೀಡುತ್ತಿಲ್ಲ. ಈಗ ನಾವು ನ್ಯಾಯಾಲಯದ ಮೊರೆಹೋಗುತ್ತೇವೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಶೆಹಬಾಜ್ ಖಾಷ್ಖೇಲಿ ಮತ್ತು ಅವನ ಬೆಂಬಲಿಗರು ನನ್ನ ಹೆಂಡತಿಯನ್ನು ಮನೆಯ ಸಮೀಪದಿಂದ ಅಪಹರಿಸಿದ್ದಾರೆ ಎಂದು ಪತಿ ವಿವರಿಸಿದ್ದಾರೆ.
ಎರಡು ದಿನಗಳ ನಂತರ ಅವಳನ್ನು ಧಾರ್ಮಿಕ ಕೇಂದ್ರಕ್ಕೆ ಕರೆದೊಯ್ದು ಇಸ್ಲಾಂಗೆ ಮತಾಂತರಿಸಿ, ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಂಡಿದ್ದಾನೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ನೀಡುವ ನ್ಯಾಯ ಇದೇನಾ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.