ADVERTISEMENT

ಅಕ್ರಮ ಪ್ರವೇಶ: ವಿಚಾರಣೆ ರದ್ದುಗೊಳಿಸುವಂತೆ ಚೋಕ್ಸಿ ಹೈಕೋರ್ಟ್‌ಗೆ ಮೊರೆ

ಪಿಟಿಐ
Published 7 ಜುಲೈ 2021, 5:52 IST
Last Updated 7 ಜುಲೈ 2021, 5:52 IST
ಮೆಹುಲ್‌ ಚೋಕ್ಸಿ
ಮೆಹುಲ್‌ ಚೋಕ್ಸಿ   

ನವದೆಹಲಿ: ಡೊಮಿನಿಕಾಗೆ ಅಕ್ರಮವಾಗಿ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಗೊಳಿಸುವಂತೆ ಕೋರಿ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಅಕ್ರಮ ಪ್ರವೇಶ ಆರೋಪದಡಿ ನನ್ನನ್ನು ಬಂಧಿಸಲಾಗಿದ್ದು, ಭಾರತ ಸರ್ಕಾರದ ಪ್ರತಿನಿಧಿಗಳ ನಿರ್ದೇಶನದಂತೆ ಈ ಕೆಲಸ ಮಾಡಲಾಗಿದೆ’ ಎಂದು ಚೋಕ್ಸಿ ದೂರಿದ್ದಾರೆ.

ಅಲ್ಲಿನ ವಿದೇಶಾಂಗ ಸಚಿವ, ಪೊಲೀಸ್ ಮುಖ್ಯಸ್ಥ ಮತ್ತು ಪ್ರಕರಣದ ತನಿಖಾ ಅಧಿಕಾರಿ ವಿರುದ್ಧ ಚೋಕ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ(ಪಿಎನ್‌ಬಿ) ಸುಮಾರು ₹13,500 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ಚೋಕ್ಸಿ ಭಾರತದಿಂದ ಪರಾರಿಯಾಗಿ 2018ರಿಂದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸವಾಗಿದ್ದರು. ಮೇ 23ರಂದು ಅವರನ್ನು ಡೊಮಿನಿಕಾದಲ್ಲಿ ಅಕ್ರಮ ಪ್ರವೇಶದ ಆರೋಪದಡಿ ಬಂಧಿಸಲಾಯಿತು. ಡೊಮಿನಿಕಾದ ವಲಸೆ ಸಚಿವಾಲಯವು ಅವರನ್ನು ನಿಷೇಧಿತ ವಲಸೆಗಾರ ಎಂದು ಘೋಷಿಸಿದೆ.

‘ತನ್ನ ವಿರುದ್ಧ ಅಕ್ರಮ ಪ್ರವೇಶದ ಆರೋಪಗಳಡಿ ಪ್ರಕರಣ ದಾಖಲಿಸುವ ನಿರ್ಧಾರ ಪೊಲೀಸ್ ಮುಖ್ಯಸ್ಥಲಿಂಕನ್ ಕಾರ್ಬೆಟ್ ಮತ್ತು ಪ್ರಕರಣದ ತನಿಖಾ ಅಧಿಕಾರಿ ಸಾರ್ಜೆಂಟ್ ಅಲ್ಲೆನ್ ಅವರು ಸ್ವತಂತ್ರ ತೆಗೆದುಕೊಂಡಿದ್ದಲ್ಲ. ಇದು ಭಾರತ ಸರ್ಕಾರದ ಪ್ರತಿನಿಧಿಗಳಿಂದ ನಿರ್ದೇಶಿಸಲ್ಪಟ್ಟಿದೆ’ ಎಂದು ಅವರು ದೂರಿದ್ದಾರೆ.

‘ತನ್ನ ವಿರುದ್ಧ ಮಾಡಲಾಗಿರುವ ಅಕ್ರಮ ಪ್ರವೇಶದ ಆರೋಪಗಳು ಕಾನೂನಿನ ಉಲ್ಲಂಘಣೆಯಾಗಿದೆ. ಇದನ್ನು ರದ್ದುಗೊಳಿಸಬೇಕು. ನಾನುಆಂಟಿಗುವಾ ಮತ್ತು ಬಾರ್ಬುಡಾ ಪ್ರಜೆ. ನನ್ನನ್ನು ಕೆಲವು ಭಾರತೀಯರು ಅಲ್ಲಿಂದ ಅಪಹರಿಸಿ, ಒತ್ತಾಯಪೂರ್ವಕವಾಗಿ ಡೊಮಿನಿಕಾಗೆ ಕರೆದುಕೊಂಡು ಬಂದಿದ್ದಾರೆ. ನಾನು ಈ ಬಗ್ಗೆ ಪೋಲೀಸರಿಗೆ ತಿಳಿಸಿದರೂ, ಅವರು ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಚೋಕ್ಸಿ ನ್ಯಾಯಾಲಯಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.