ADVERTISEMENT

ಪಾಕ್ ಚುನಾವಣೆ; ಹಿಂದೂಗಳಲ್ಲಿ ಕಡೆಗಣನೆಯ ಭಾವನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 15:35 IST
Last Updated 3 ಫೆಬ್ರುವರಿ 2024, 15:35 IST
ಪಾಕಿಸ್ತಾನದ ಕರಾಚಿಯ ರಸ್ತೆಯೊಂದರಲ್ಲಿ ರಾಜಕೀಯ ಪಕ್ಷಗಳ ಧ್ವಜಗಳು ಹಾರಾಡುತ್ತಿರುವುದು
ಎಎಫ್‌ಪಿ ಚಿತ್ರ
ಪಾಕಿಸ್ತಾನದ ಕರಾಚಿಯ ರಸ್ತೆಯೊಂದರಲ್ಲಿ ರಾಜಕೀಯ ಪಕ್ಷಗಳ ಧ್ವಜಗಳು ಹಾರಾಡುತ್ತಿರುವುದು ಎಎಫ್‌ಪಿ ಚಿತ್ರ    

ಕರಾಚಿ (ಪಿಟಿಐ): ಪಾಕಿಸ್ತಾನದಲ್ಲಿ ಫೆಬ್ರುವರಿ 8ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎನ್ನುವ ಮನೋಭಾವ ಇಲ್ಲಿನ ಅಲ್ಪಸಂಖ್ಯಾತ ಹಿಂದೂಗಳಲ್ಲಿ ಮೂಡಿದೆ.

ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಾಗದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಸಂಖ್ಯೆ ಕೇವಲ ಶೇ. 2.14 ಆಗಿದ್ದು, ಸಿಂಧ್ ಪ್ರಾಂತ್ಯದಲ್ಲಿ ಅವರ ಸಂಖ್ಯೆ ಶೇ.9 ರಷ್ಟಿದೆ.     

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಪೈಕಿ ಹಿಂದೂಗಳೇ ಪ್ರಮುಖವಾಗಿದ್ದು, ಸಿಂಧ್ ಪ್ರಾಂತ್ಯದಲ್ಲಿ ಅವರ ಸಂಖ್ಯೆ 47.7 ಲಕ್ಷದಷ್ಟಿದೆ. ನಂತರದ ಸ್ಥಾನಗಳಲ್ಲಿ ಕ್ರೈಸ್ತರು (16 ಲಕ್ಷ), ಅಹ್ಮದಿಗಳು (1.65 ಲಕ್ಷ) ಮತ್ತು ಸಿಖ್ಖರು (8,833) ಇದ್ದಾರೆ. ಆದರೆ, ಹಿಂದೂಗಳಲ್ಲಿ ಮತದಾನದ ಹಕ್ಕನ್ನು ಪಡೆದವರ ಸಂಖ್ಯೆ ತೀರಾ ಕಡಿಮೆಯಿದೆ.

ADVERTISEMENT

ಪಾಕಿಸ್ತಾನದ ಸಂವಿಧಾನವು ಅಲ್ಪಸಂಖ್ಯಾತರಿಗೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 10 ಕ್ಷೇತ್ರ ಹಾಗೂ ಪ್ರಾಂತ್ಯಗಳಲ್ಲಿ 24 ಸ್ಥಾನಗಳನ್ನು ಮೀಸಲಿಟ್ಟಿದೆ. ತಮಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎನ್ನುವ ನೋವು ಹಿಂದೂ ಸಮುದಾಯದಲ್ಲಿದೆ. ಹೀಗಾಗಿ ಸಮುದಾಯದ ಅನೇಕರು ಮತದಾನಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ.     

ಸರ್ಕಾರಿ ಅಧಿಕಾರಿಗಳು ದಲಿತರನ್ನು ಹಿಂದೂ ಸಮುದಾಯದ ಪಟ್ಟಿಯಿಂದ ಕೈಬಿಟ್ಟಿದ್ದು, ಅದರಿಂದಾಗಿ ಹಿಂದೂ ಮತದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಕೆಲವು ಹಿಂದೂ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮತದಾರರಾಗಿ ಹಾಗೂ ಉಮೇದುವಾರರಾಗಿ ಹಿಂದೂಗಳಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವುದು ಅವರ ಅರೋಪ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.